ವಿಜಯಪುರ, ಜೂನ್ 11: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶಾಖೆಯಲ್ಲಿ 2025 ರ ಸೆಪ್ಟೆಂಬರ್ 16 ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ತಮಗೆ ಸೇರಿದ ಚಿನ್ನಾಭರಣಗಳು ವಾಪಸ್ ಸಿಗದೆ ಆಕ್ರೋಶಗೊಂಡಿರುವ ಗ್ರಾಹಕರು ಬುಧವಾರ ರಾತ್ರಿಯಿಡೀ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಂಟ್ರಿ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಕೈಕಾಲು ಕಟ್ಟಿ ಅಂದು ಬರೋಬ್ಬರಿ 1.50 ಕೋಟಿ ರೂಪಾಯಿ ನಗದು ಮತ್ತು 20 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು 9 ತಿಂಗಳು ಕಳೆದರೂ ಲಾಕರ್ನಲ್ಲಿಟ್ಟಿದ್ದ ಹಾಗೂ ಸಾಲಕ್ಕಾಗಿ ಅಡವಿಟ್ಟಿದ್ದ ತಮ್ಮ ಚಿನ್ನದ ಒಡವೆಗಳು ವಾಪಸ್ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ, ಜೂನ್ 6 ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಹೇಳಿತ್ತು. ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಷ್ಟಾದರೂ ಜೂನ್ 10 ಕಳೆದರೂ ಬ್ಯಾಂಕ್ನಿಂದ ಯಾವುದೇ ಪರಿಹಾರ ಸಿಗದ ಕಾರಣ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನಾಕಾರರು ತಡರಾತ್ರಿ ಮನೆಗೆ ತೆರಳಿದ್ದಾರೆ.
ಪ್ರಸ್ತುತ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ದರೋಡೆಕೋರರಿಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅವರಿಂದ 6.5 ಕೆಜಿ ಚಿನ್ನ ಹಾಗೂ 41 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು ತಲೆಮರೆಸಿಕೊಂಡಿರುವ ಪ್ರಮುಖ ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
