ಚಾಮರಾಜಪೇಟೆ ಪೊಲೀಸ್ ಠಾಣೆ ಬಳಿಯೇ ಕೊಕೇನ್ ಡೆಲಿವರಿ ದಂಧೆ! 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ – Kannada News | Bengaluru Cocaine Racket: Drug Peddler Arrested Near Chamarajpet Police Station, Rs 50 Lakh Cocaine Seized

ಬೆಂಗಳೂರು, ಆಗಸ್ಟ್ 3: ಬೆಂಗಳೂರಿನ (Bengaluru) ಚಾಮರಾಜಪೇಟೆ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲೇ ಬೈಕ್ ಆಧಾರಿತ ಡೆಲಿವರಿ ಸೇವೆ ಬಳಸಿಕೊಂಡು ಕೊಕೇನ್ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದವಾಗಿ ಪದೇಪದೆ ಡೆಲಿವರಿ ಬೈಕ್‌ಗಳು ಅಪಾರ್ಟ್‌ಮೆಂಟ್ ಬಳಿ ಬರುತ್ತಿರುವುದನ್ನು ಗಮನಿಸಿದ ಪೊಲೀಸರಿಗೆ ಡ್ರಗ್ಸ್ ಜಾಲದ ಸುಳಿವು ಸಿಕ್ಕಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 50 ಲಕ್ಷ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಉತ್ತರ ಪ್ರದೇಶ ಮೂಲದ, ಬೆಂಗಳೂರಿನ ಬೇಗೂರು ಮೇನ್‌ರೋಡ್ ನಿವಾಸಿ 30 ವರ್ಷದ ರಾಜು ಎಂದು ಗುರುತಿಸಲಾಗಿದೆ. ಜುಲೈ 19ರ ಮಧ್ಯರಾತ್ರಿ ಕನ್ಸರ್ವೆನ್ಸಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಬಳಿ ಪ್ರತಿ 15ರಿಂದ 20 ನಿಮಿಷಕ್ಕೊಮ್ಮೆ ಲಾಜಿಸ್ಟಿಕ್ಸ್ ಸೇವೆಯ ಬೈಕ್‌ಗಳು ಬರುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.

ಪಾರ್ಸೆಲ್ ನೀಡುವ ಬದಲು ಸಣ್ಣ ಪ್ಯಾಕೆಟ್ ಪಡೆಯುತ್ತಿದ್ದ ಡೆಲಿವರಿ ಬಾಯ್!

ಡೆಲಿವರಿ ಸಿಬ್ಬಂದಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪಾರ್ಸೆಲ್ ನೀಡುವ ಬದಲು, ಕಾರಿನ ಬಳಿ ನಿಂತಿದ್ದ ವ್ಯಕ್ತಿಯಿಂದ ಸಣ್ಣ ಪ್ಯಾಕೆಟ್‌ಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಡೆಲಿವರಿ ರೈಡರ್‌ವೊಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ, ಪಾರ್ಸೆಲ್‌ಗಳನ್ನು ರಾಜು ಬುಕ್ ಮಾಡಿರುವುದು ಗೊತ್ತಾಗಿದೆ.

ಪೊಲೀಸರ ಪ್ರಕಾರ, ಕೇವಲ 50 ರೂ. ಡೆಲಿವರಿ ಶುಲ್ಕವಿದ್ದರೂ, ವೇಗವಾಗಿ ಡೆಲಿವರಿ ಮಾಡಿಸಲು ಹಾಗೂ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ರಾಜು ಪ್ರತಿ ರೈಡರ್‌ಗೆ ಸುಮಾರು 300 ರೂ. ಟಿಪ್ ನೀಡುತ್ತಿದ್ದ ಎನ್ನಲಾಗಿದೆ.

ಚಾಕೊಲೇಟ್ ಬಾಕ್ಸ್ ಒಳಗೆ ಕೊಕೇನ್ ಸಾಗಾಟ

ಪಾರ್ಸೆಲ್ ಪರಿಶೀಲಿಸಿದಾಗ ಸಣ್ಣ ಚಾಕೊಲೇಟ್ ಬಾಕ್ಸ್‌ಗಳ ಒಳಗೆ ಕೊಕೇನ್‌ ಅನ್ನು ಬಚ್ಚಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಸ್ಥಳದಲ್ಲೇ ರಾಜುವನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎನ್ನಲಾದ ಮತ್ತೊಬ್ಬ ಆರೋಪಿ ಅಕ್ಷಿತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

ಕೊಕೇನ್, ಕಾರು ಜಪ್ತಿ

ಪೊಲೀಸರು 116.3 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದು, ಇದರ ಅಂದಾಜು ಮೌಲ್ಯ ಸುಮಾರು 50 ಲಕ್ಷ ರೂ. ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜುವಿನ ಗ್ರಾಹಕರಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಹಾಗೂ ಉದ್ಯಮಿಗಳು ಇದ್ದಿರಬಹುದು ಎಂದು ಶಂಕಿಸಲಾಗಿದೆ.

ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧಿತ ರಾಜುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಕೇನ್ ಎಲ್ಲಿಂದ ಬರುತ್ತಿತ್ತು, ಯಾರಿಗೆ ಪೂರೈಕೆ ಮಾಡಲಾಗುತ್ತಿತ್ತು, ಎಷ್ಟು ದಿನಗಳಿಂದ ಈ ದಂಧೆ ನಡೆಸಲಾಗುತ್ತಿತ್ತು ಮತ್ತು ಇದರ ಹಿಂದೆ ದೊಡ್ಡ ಅಂತರರಾಜ್ಯ ಡ್ರಗ್ಸ್ ಜಾಲವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *