ಬಿಎಂಟಿಸಿಯ ಎಲೆಕ್ಟ್ರಿಕ್ (ಇವಿ) ಬಸ್ (ಸಾಂದರ್ಭಿಕ ಚಿತ್ರ)Image Credit source: tv9
ಬೆಂಗಳೂರು, ಜುಲೈ 28: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಬಿಎಂಟಿಸಿ ಬಸ್‌ಗಳು ನಿಗದಿತ ಸಮಯಕ್ಕೆ ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿವೆ. ಇದರಿಂದ ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖ ಕಾರಣವಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ (ಇವಿ) ಬಸ್‌ಗಳು ಸಮರ್ಪಕವಾಗಿ ಕಾರ್ಯಾಚರಣೆ ನಡೆಸದಿರುವುದು ಹಾಗೂ ಚಾಲಕರ ಕೊರತೆ ಎಂಬುದು ತಿಳಿದುಬಂದಿದೆ.
ನಗರದಲ್ಲಿ ಬಿಎಂಟಿಸಿಯ 15 ಎಲೆಕ್ಟ್ರಿಕ್ ಬಸ್ ಡಿಪೋಗಳಲ್ಲಿ ಒಟ್ಟು 1,760 ಇವಿ ಬಸ್‌ಗಳು ಕಾರ್ಯಾಚರಣೆಗೆ ಲಭ್ಯವಿವೆ. ಆದರೆ, ಪ್ರತಿದಿನ 500ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ ಇಳಿಯುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದರ ಪರಿಣಾಮ ಹಲವು ಮಾರ್ಗಗಳಲ್ಲಿ ಬಸ್‌ಗಳ ನಡುವಿನ ಅಂತರ ಹೆಚ್ಚಾಗಿದ್ದು, ಪ್ರಯಾಣಿಕರು ದೀರ್ಘ ಸಮಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇವಿ ಬಸ್‌ಗಳ ಕಾರ್ಯಾಚರಣೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಈ ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ನಿರ್ವಾಹಕರನ್ನು (ಕಂಡಕ್ಟರ್‌ಗಳನ್ನು) ಬೇರೆ ಡಿಪೋಗಳಿಗೆ ವರ್ಗಾಯಿಸಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎನ್ನಲಾಗಿದೆ.
ಚಾಲಕರ ಕೊರತೆಗೆ ಸಂಬಳವೇ ಕಾರಣ?
ಸಾರಿಗೆ ನೌಕರರ ಮುಖಂಡ ಜಗದೀಶ್ ಅವರ ಪ್ರಕಾರ, ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಗಳು ಚಾಲಕರಿಗೆ ಭರವಸೆ ನೀಡಿದಷ್ಟು ವೇತನ ನೀಡುತ್ತಿಲ್ಲ ಎಂಬ ಆರೋಪವಿದೆ. ಕೆಲಸಕ್ಕೆ ಸೇರಿಸಿಕೊಳ್ಳುವಾಗ 25,000 ರೂ. ಸಂಬಳ ನೀಡುವುದಾಗಿ ಹೇಳಲಾಗುತ್ತಿದೆಯಾದರೂ, ನಂತರ 20,000 ರೂ. ಮಾತ್ರ ನೀಡಲಾಗುತ್ತಿದೆ ಹಾಗೂ ವೇತನವೂ ಸಮಯಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅನೇಕ ಚಾಲಕರು ಕೆಲಸ ತೊರೆಯುತ್ತಿದ್ದು, ಹೊಸ ಚಾಲಕರು ಸೇರ್ಪಡೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಇತರ ಆರೋಪಗಳೇನು?
ಇತ್ತೀಚೆಗೆ ಎಲೆಕ್ಟ್ರಿಕ್ ಬಸ್‌ಗಳಿಗೆ ಸಂಬಂಧಿಸಿದ ಅಪಘಾತಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅನುಭವಿ ಚಾಲಕರನ್ನು ನೇಮಕ ಮಾಡಿಕೊಳ್ಳಲು ಗುತ್ತಿಗೆ ಸಂಸ್ಥೆಗಳು ಕಷ್ಟಪಡುತ್ತಿವೆ. ಇದರ ಜೊತೆಗೆ, ಕೆಲ ಬಿಎಂಟಿಸಿ ಅಧಿಕಾರಿಗಳು ಲಂಚದ ಆಮಿಷಕ್ಕೆ ಒಳಗಾಗಿ, ಕಾರ್ಯಾಚರಣೆ ನಡೆಸದ ಕೆಲವು ಇವಿ ಬಸ್‌ಗಳನ್ನೂ ಸಂಚಾರ ನಡೆಸಿದಂತೆ ವರದಿಯಲ್ಲಿ ದಾಖಲಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಪ್ರಯಾಣಿಕರ ಅಳಲು
ಬಿಎಂಟಿಸಿ ಬಸ್‌ಗಳ ಅಲಭ್ಯತೆ ಬಗ್ಗೆ ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಮಯಕ್ಕೆ ಬರುತ್ತಿಲ್ಲ. ಇದರಿಂದ ದೈನಂದಿನ ಪ್ರಯಾಣದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕ ರಾಮು ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಕುಂಠಿತಗೊಂಡಿರುವುದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
