ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಪಿ ಲಂಕೇಶ್ (P Lankesh) ಅವರು ಚಿತ್ರರಂಗದಲ್ಲಿಯೂ ಕೃಷಿ ಮಾಡಿದ್ದರು. ಕೆಲವು ಸಿನಿಮಾಗಳನ್ನು ನಿರ್ದೇಶಿಸಿ, ನಟನೆ ಸಹ ಮಾಡಿದ್ದರು ಲಂಕೇಶ್. ಇದೀಗ ಅವರ ಮೂರನೇ ತಲೆಮಾರು ಅಂದರೆ ಮೊಮ್ಮಕ್ಕಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಲಂಕೇಶ್ ಅವರ ಪುತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಲಂಕೇಶ್ ಅವರ ಮೊಮ್ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ನಿರ್ದೇಶಕಿ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇಶಾ ಲಂಕೇಶ್ ಅವರು ನಟನಾ ತರಬೇತಿಗಳನ್ನು ಸಹ ಪಡೆದಿದ್ದಾರಂತೆ. ಇದೀಗ ಹೊಸ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಅವರ ಮೊದಲ ಸಿನಿಮಾವನ್ನು ಖ್ಯಾತ ಕತೆಗಾರ, ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವುದಾಗಿ ಹೇಳಿರುವ ಇಶಾ ಲಂಕೇಶ್, ತಮಗೆ ನಟಿ ಆಗಬೇಕೆಂಬ ಕನಸು ತಮ್ಮ ತಾಯಿಯಿಂದಲೇ ಬಂತು ಎಂದಿದ್ದಾರೆ. ತಾಯಿ ಕವಿತಾ ಲಂಕೇಶ್ ನಿರ್ದೇಶನ ಮಾಡುತ್ತಿದ್ದ ಸಿನಿಮಾಗಳ ಸೆಟ್ಗಳಲ್ಲಿ ಓಡಾಡಿ, ಅಲ್ಲಿನ ವಾತಾವರಣ ನೋಡಿ ತಮಗೆ ನಟಿಯಾಗಬೇಕು ಎಂಬ ಆಸೆ ಮೂಡಿತು ಎಂದಿದ್ದಾರೆ. ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ಲಿಟ್ರೇಚರ್ ಮತ್ತು ಫರ್ಫಾರ್ಮೆನ್ಸ್ ಕಲಿತಿರುವ ಇಶಾ, ಅಲ್ಲಿಯೇ ರಂಗಭೂಮಿಯಲ್ಲೂ ತೊಡಗಿದ್ದರಂತೆ.
ಇದನ್ನೂ ಓದಿ:ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ
ಬಳಿಕ ಬ್ರಿಟನ್ನಲ್ಲಿ ನಟನೆಗೆ ಸಂಬಂಧಿಸಿದ ಕೋರ್ಸ್ ಒಂದನ್ನು ಸಹ ಮುಗಿಸಿ ಬಂದಿದ್ದಾರೆ. ಇಲ್ಲಿ, ಪ್ರಕಾಶ್ ರೈ ಅವರ ನಿರ್ದಿಗಂತ ರಂಗಭೂಮಿ ಥಿಯೇಟರ್ನಲ್ಲಿ ಕೋರ್ಸ್ ಮಾಡಿದ್ದು, ನಾಟಕಗಳಲ್ಲಿ ನಟಿಸಿದ್ದಾರೆ. ಕೆಲವು ಜಾಹೀರಾತುಗಳಿಗೆ, ಸಿನಿಮಾಗಳಿಗೆ ಸಹ ಇಲ್ಲಿ ಆಡಿಷನ್ ನೀಡಿದ್ದರಂತೆ. ಕೊನೆಗೆ ಪ್ರೀತಂ ಗುಬ್ಬಿ ಅವರು ಆಸಕ್ತಿವಹಿಸಿ, ಕತೆಯೊಂದನ್ನು ಹೇಳಿದ್ದು, ಇದೀಗ ಸಿನಿಮಾ ಅನ್ನು ಇಶಾ ಒಪ್ಪಿಕೊಂಡಿದ್ದಾರೆ. ಇದು ಅಡ್ವೇಂಚರಸ್ ಪ್ರೇಮಕತೆ ಎಂದು ಇಶಾ ತಮ್ಮ ಮೊದಲ ಸಿನಿಮಾವನ್ನು ಬಣ್ಣಿಸಿದ್ದಾರೆ.
ಲಂಕೇಶ್ ಅವರು ‘ಪಲ್ಲವಿ’, ‘ಖಂಡವಿದೆಕೊ, ಮಾಂಸವಿದೆಕೊ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಸಂಸ್ಕಾರ’ ಸಿನಿಮಾನಲ್ಲಿ ನಟನೆಯನ್ನೂ ಮಾಡಿದ್ದರು. ಬಳಿಕ ಅವರ ಪುತ್ರ ಇಂದ್ರಜಿತ್ ಲಂಕೇಶ್, ‘ಮೊನಾಲಿಸಾ’, ‘ತುಂಟಾಟ’, ‘ಐಶ್ವರ್ಯಾ’, ‘ಹುಡುಗ ಹುಡುಗಿ’, ‘ಲಂಕೇಶ್ ಪತ್ರಿಕೆ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇಂದ್ರಜಿತ್ ಅವರ ಪುತ್ರ ಸಮರ್ಜಿತ್ ಅವರು ಇತ್ತೀಚೆಗಷ್ಟೆ ‘ಗೌರಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಇನ್ನು ಲಂಕೇಶ್ ಅವರ ಪುತ್ರಿ ಕವಿತಾ ಲಂಕೇಶ್, ‘ದೇವಿರಿ’, ‘ಅವ್ವ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಕವಿತಾ ಅವರ ಪುತ್ರಿ ಇಶಾ, ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಅವರ ಮೊದಲ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸಿನಿಮಾದ ಇತರೆ ಪಾತ್ರವರ್ಗವನ್ನು ಶೀಘ್ರವೇ ಘೋಷಿಸಲಾಗುತ್ತದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:38 am, Sat, 11 July 26
