ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ: ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ – Kannada News | Chinnaswamy Stampede Case: Karnataka Govt Drops Departmental Inquiry Against IPS Officer B Dayananda, Clears All Charges

ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

ಬೆಂಗಳೂರು, ಜುಲೈ 14: ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡದ ಐಪಿಎಲ್​​ ವಿಜಯೋತ್ಸವದ ವೇಳೆ 2025ರ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು, ಅವರ ವಿರುದ್ಧ ಹೊರಿಸಲಾಗಿದ್ದ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಲಾಗಿದೆ.

ಈ ಹಿಂದೆ ಸರ್ಕಾರದ ಆದೇಶದಂತೆ, ಆಗಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ ಅವರನ್ನು ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969ರ ನಿಯಮ 3(1)(a) ಅಡಿಯಲ್ಲಿ ಇಲಾಖಾ ವಿಚಾರಣೆ ಆರಂಭಿಸುವ ಉದ್ದೇಶದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ನಿಯಮ 3(7)(c) ಅಡಿಯಲ್ಲಿ ಅಮಾನತು ಆದೇಶವನ್ನು ಹಿಂಪಡೆದು, ನಿಯಮ 8ರ ಅಡಿಯಲ್ಲಿ ಇಲಾಖಾ ವಿಚಾರಣೆ ಪ್ರಾರಂಭಿಸಲಾಗಿತ್ತು. ಈ ಸಂಬಂಧ ನಿಯಮ 8(4)ರ ಅಡಿಯಲ್ಲಿ ಆರೋಪಪಟ್ಟಿ ಮತ್ತು ಶೋಕಾಸ್ ನೋಟಿಸ್ ನೀಡಲಾಗಿತ್ತು.

ಇದನ್ನೂ ಓದಿ:  ದಯಾನಂದ್ ಮಾಡಿದ ತಪ್ಪೇನು?; ಅಮಾನತಿಗೆ ಕಾರಣ ನೀಡಿದ ಸರ್ಕಾರ

ಲಿಖಿತ ಸಮರ್ಥನೆ ಸಲ್ಲಿಸಿದ್ದ ಬಿ. ದಯಾನಂದ

ಬಿ. ದಯಾನಂದ ಅವರು 2025ರ ಸೆಪ್ಟೆಂಬರ್ 8ರಂದು ತಮ್ಮ ಲಿಖಿತ ಸಮರ್ಥನೆ ಸಲ್ಲಿಸಿ, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, ಆರೋಪಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದರು. ಅವರ ಸಮರ್ಥನೆ ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ಬಳಿಕ, ಸಮರ್ಥ ಪ್ರಾಧಿಕಾರ ಇಲಾಖಾ ವಿಚಾರಣೆಯನ್ನು ಕೈಬಿಡಲು ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ 2026ರ ಜುಲೈ 14ರಂದು ಹೊರಡಿಸಿದ ಸರ್ಕಾರದ ಆದೇಶದಲ್ಲಿ, ಬಿ. ದಯಾನಂದ ವಿರುದ್ಧ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969ರ ನಿಯಮ 8(4)ರ ಅಡಿಯಲ್ಲಿ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದ್ದು, ಅವರ ವಿರುದ್ಧದ ಎಲ್ಲ ಆರೋಪಗಳಿಂದ ಅವರನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-4) ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಹೊರಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *