ನವದೆಹಲಿ, ಏಪ್ರಿಲ್ 17: ಕೇಂದ್ರ ಸರ್ಕಾರ ವಿದೇಶಗಳಿಂದ ಚಿನ್ನ ಮತ್ತು ಬೆಳ್ಳಿ ಆಮದು (gold and silver import) ಮಾಡಿಕೊಳ್ಳಲು ಭಾರತದ 15 ಪ್ರಮುಖ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಎಸ್ಬಿಐ, ಎಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಇತ್ಯಾದಿ 15 ಬ್ಯಾಂಕುಗಳು 2029ರ ಮಾರ್ಚ್ 31ರವರೆಗೂ ಚಿನ್ನ, ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ಸರ್ಕಾರದ ಅನುಮತಿ ಪಡೆದಿವೆ. ಎರಡು ಬ್ಯಾಂಕುಗಳಿಗೆ ಚಿನ್ನವನ್ನು ಮಾತ್ರವೇ ಆಮದು ಮಾಡಿಕೊಳ್ಳುವ ಅನುಮತಿ ಸಿಕ್ಕಿದೆ. ಅನುಮತಿ ಪಡೆದ ಬ್ಯಾಂಕುಗಳಲ್ಲಿ ಎರಡು ವಿದೇಶೀ ಬ್ಯಾಂಕುಗಳೂ ಸೇರಿವೆ.
ಸರ್ಕಾರದ ಅನುಮತಿ ಇಲ್ಲದೇ ಬ್ಯಾಂಕುಗಳು ಚಿನ್ನ ಮತ್ತು ಬೆಳ್ಳಿಯನ್ನು ಆಮದು ಮಾಡಿಕೊಳ್ಳುವಂತಿಲ್ಲ. 2026ರ ಮಾರ್ಚ್ 31ರವರೆಗೂ ಮಾತ್ರವೇ ಅನುಮತಿ ಇತ್ತು. ಆ ನಂತರ ಸರ್ಕಾರದಿಂದ ಯಾವುದೇ ಹೊಸ ಅಧಿಸೂಚನೆ ಬಂದಿರಲಿಲ್ಲ. ಹೀಗಾಗಿ, ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದ್ದ ಸರಕುಗಳು ಕಸ್ಟಮ್ಸ್ ವಿಭಾಗದಲ್ಲೇ ಉಳಿದುಕೊಂಡಿದ್ದವು. ಇದರಿಂದ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇರದ ಪರಿಸ್ಥಿತಿ ಬರುವುದರಲ್ಲಿತ್ತು.
ಇದನ್ನೂ ಓದಿ: Gold Rates: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ; ಇಲ್ಲಿದೆ ದರಪಟ್ಟಿ
ಭಾರತದಲ್ಲಿ ಚಿನ್ನಕ್ಕೆ ತಗ್ಗಿದ ಬೇಡಿಕೆ
ಭಾರತದಲ್ಲಿ 2025ರಲ್ಲಿ ಚಿನ್ನಕ್ಕೆ ಇರುವ ಬೇಡಿಕೆ 710.9 ಮೆಟ್ರಿಕ್ ಟನ್ಗೆ ಇಳಿದಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಇದು ಐದು ವರ್ಷದಲ್ಲೇ ಅತ್ಯಂತ ಕಡಿಮೆ ಬೇಡಿಕೆ ಎನಿಸಿದೆ. ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಲು ಗ್ರಾಹಕರ ಖರೀದಿ ನಿರಾಸಕ್ತಿ ಪ್ರಮುಖ ಕಾರಣವಿರಬಹುದು. ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆಗೊಂಡರೆ ಅದು ದೇಶದ ಆರ್ಥಿಕತೆಗೆ ಸಕಾರಾತ್ಮಕ ಕೊಡುಗೆ ನೀಡಬಲ್ಲುದು.
ಚೀನಾ ನಂತರ ಭಾರತವೇ ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಮತ್ತು ಬೆಳ್ಳಿ ಖರೀದಿಸುವುದು. ಚಿನ್ನಕ್ಕೆ ಬೇಡಿಕೆ ಕಡಿಮೆ ಆದರೆ ಆಮದು ವೆಚ್ಚ ಕಡಿಮೆ ಆಗುತ್ತದೆ. ಡಾಲರ್ ಎದುರು ರುಪಾಯಿ ಮೌಲ್ಯ ಉತ್ತಮಗೊಳ್ಳುತ್ತದೆ. ಜಾಗತಿಕವಾಗಿ ಚಿನ್ನ, ಬೆಳ್ಳಿ ಬೆಲೆಗಳು ತಗ್ಗಬಹುದು.
ಚಿನ್ನ, ಬೆಳ್ಳಿ ಎರಡನ್ನೂ ಆಮದು ಮಾಡಲು ಅನುಮತಿಸಲಾದ ಬ್ಯಾಂಕುಗಳಿವು
- ಎಕ್ಸಿಸ್ ಬ್ಯಾಂಕ್
- ಬ್ಯಾಂಕ್ ಆಫ್ ಇಂಡಿಯಾ
- ಡ್ಯೂಶೆ ಬ್ಯಾಂಕ್
- ಫೆಡರಲ್ ಬ್ಯಾಂಕ್
- ಎಚ್ಡಿಎಫ್ಸಿ ಬ್ಯಾಂಕ್
- ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ
- ಐಸಿಐಸಿಐ ಬ್ಯಾಂಕ್
- ಇಂಡಸ್ಇಂಡ್ ಬ್ಯಾಂಕ್
- ಇಂಡಿಯನ್ ಓವರ್ಸೀಸ್ ಬ್ಯಾಂಕ್
- ಕೋಟಕ್ ಮಹೀಂದ್ರ ಬ್ಯಾಂಕ್
- ಕರೂರ್ ವೈಷ್ಯ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಆರ್ಬಿಐ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಯೆಸ್ ಬ್ಯಾಂಕ್
ಇದನ್ನೂ ಓದಿ: ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಅದಾನಿ; ಟಾಪ್-20ಯಲ್ಲಿ ಅಮೆರಿಕನ್ನರನ್ನು ಬಿಟ್ಟರೆ ಭಾರತೀಯರೇ ಹೆಚ್ಚು
ಚಿನ್ನವನ್ನು ಮಾತ್ರವೇ ಆಮದು ಮಾಡಿಕೊಳ್ಳಲು ಅನುಮತಿಸಲಾದ ಬ್ಯಾಂಕುಗಳು
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ಸಬೆರ್ ಬ್ಯಾಂಕ್ (Sberbank)
ಬ್ಯಾಂಕುಗಳು ಈ ಚಿನ್ನ, ಬೆಳ್ಳಿಯನ್ನು ಏನು ಮಾಡುತ್ತವೆ?
ಬ್ಯಾಂಕುಗಳು ಈ ಚಿನ್ನವನ್ನು ರೀಟೇಲ್ ಕ್ಷೇತ್ರಕ್ಕೆ ಮಾರುತ್ತವೆ. ಆಭರಣದಂಗಡಿಗಳು, ಗೋಲ್ಡ್ ರಿಫೈನರಿಗಳು, ರೀಟೇಲ್ ಮಾರಾಟಗಾರರು ಮೊದಲಾದವರಿಗೆ ಮಾರುತ್ತವೆ. ಈ ಮೂಲಕ ಬೇಡಿಕೆಗೆ ತಕ್ಕಷ್ಟು ಹೊಸ ಚಿನ್ನ, ಬೆಳ್ಳಿ ಸರಕುಗಳು ಮಾರುಕಟ್ಟೆ ಪ್ರವೇಶಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ