ಛೇ, ಇದೆಂಥಾ ಕ್ರೌರ್ಯ! ಜಗಳ ಬಿಡಿಸಲು ಹೋದ ಗರ್ಭಿಣಿಯ ಹೊಟ್ಟೆಗೆ ಒದ್ದ ಕಿರಾತಕರು, ಗರ್ಭದಲ್ಲಿದ್ದ ಅವಳಿ ಶಿಶುಗಳು ದಾರುಣ ಸಾವು

ಛೇ, ಇದೆಂಥಾ ಕ್ರೌರ್ಯ! ಜಗಳ ಬಿಡಿಸಲು ಹೋದ ಗರ್ಭಿಣಿಯ ಹೊಟ್ಟೆಗೆ ಒದ್ದ ಕಿರಾತಕರು, ಗರ್ಭದಲ್ಲಿದ್ದ ಅವಳಿ ಶಿಶುಗಳು ದಾರುಣ ಸಾವು

ಹಾವೇರಿ, ಏಪ್ರಿಲ್ 10: ಸಾಲದ ಹಣ ವಾಪಸ್ ಕೇಳುವ ಭರದಲ್ಲಿ ಗುಂಪೊಂದು ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ, ಹೊಟ್ಟೆಯಲ್ಲಿದ್ದ ಆರು ತಿಂಗಳ ಅವಳಿ-ಜವಳಿ ಶಿಶುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ. ಅಲ್ಲಿಪುರ ಗ್ರಾಮದ ಹಾಲವ್ವ ಎಂಬುವವರು ಮಗಳ ಸೀಮಂತ ಕಾರ್ಯಕ್ರಮಕ್ಕಾಗಿ ಊರಿಗೆ ಬಂದಿದ್ದರು. ಹಾಲವ್ವ ಅವರು ಗ್ರಾಮದ ಸುರೇಶ ಲಮಾಣಿ ಎಂಬುವವರಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು.

ಮಾರ್ಚ್ 28ರಂದು ಹಣ ವಾಪಸ್ ಕೇಳಲು ಬಂದ ಸುರೇಶ ಮತ್ತು ಆತನ ಕುಟುಂಬಸ್ಥರು ಗಲಾಟೆ ಆರಂಭಿಸಿದ್ದಾರೆ. ‘ಮಗಳ ಸೀಮಂತ ಮುಗಿದ ಮೇಲೆ ಹಣ ಕೊಡುತ್ತೇವೆ, ಸ್ವಲ್ಪ ಸಮಯ ಕೊಡಿ’ ಎಂದು ಹಾಲವ್ವ ಮನವಿ ಮಾಡಿದರೂ ಕೇಳದ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ.

ಗರ್ಭಿಣಿ ಪವಿತ್ರ ಮೇಲೆ ಹೊಟ್ಟೆಗೆ ಒದ್ದು ಹಲ್ಲೆ

ತಾಯಿ ಹಾಲವ್ವ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಜಗಳ ಬಿಡಿಸಲು ಬಂದ ಆರು ತಿಂಗಳ ಗರ್ಭಿಣಿ ಮಗಳು ಪವಿತ್ರ ಲಮಾಣಿ ಅವರ ಹೊಟ್ಟೆಗೆ ಆರೋಪಿಗಳು ಬಲವಾಗಿ ಒದ್ದಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಪವಿತ್ರ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವಧಿಪೂರ್ವ ಹೆರಿಗೆಯಾಗಿದ್ದು, ಹೊಟ್ಟೆಯಲ್ಲಿದ್ದ ಅವಳಿ ಕಂದಮ್ಮಗಳು ಪೆಟ್ಟು ಬಿದ್ದು ಸಾವನ್ನಪ್ಪಿವೆ.

ನಾಲ್ವರ ವಿರುದ್ಧ ದೂರು

ಈ ಘಟನೆಗೆ ಸಂಬಂಧಿಸಿದಂತೆ ಸುರೇಶ ಲಮಾಣಿ, ಪರಶುರಾಮ ಲಮಾಣಿ, ಮಹೇಶ ಲಮಾಣಿ ಮತ್ತು ಸಕ್ಕುಬಾಯಿ ಲಮಾಣಿ ಎಂಬ ನಾಲ್ವರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ನನ್ನ ಮಗಳ ಸೀಮಂತ ಮಾಡಬೇಕಾದ ಮನೆಯಲ್ಲಿ ಈಗ ಶವದ ಸೂತಕ ಆವರಿಸಿದೆ, ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ’ ಎಂದು ತಾಯಿ ಹಾಲವ್ವ ಕಣ್ಣೀರು ಹಾಕುತ್ತಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಿವಿ ಕೇಳಲ್ಲ, ಮಾತೂ ಬರಲ್ಲ! ಆದ್ರೂ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *