2026ರ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’ ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ದೆಹಲಿಯ ಭಾರತ್ ಮಂಟಪದಲ್ಲಿ ಚಿತ್ರತಂಡ ಇತ್ತೀಚೆಗೆ ‘ಪ್ರಥಮ ಸಂಕಲ್ಪ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಈವೆಂಟ್‌ನಲ್ಲಿ ಸಿನಿಮಾದ 4 ನಿಮಿಷಗಳ ಟ್ರೇಲರ್ ಪ್ರದರ್ಶಿಸಲಾಗಿದೆ. ಇದರ ಜೊತೆಗೆ ಚಿತ್ರದ ಪಾತ್ರಗಳನ್ನು ಪರಿಚಯಿಸುವ ವಿಶೇಷ ಕಾಮಿಕ್ ಬುಕ್ ಕೂಡ ಬಿಡುಗಡೆ ಮಾಡಲಾಗಿದೆ.
ಈ ಕಾಮಿಕ್ ಬುಕ್ ಮೂಲಕ ಸಿನಿಮಾದ ದೊಡ್ಡ ರಹಸ್ಯವೊಂದು ಹೊರಬಿದ್ದಿದೆ. ಈ ಹಿಂದೆ ಜಟಾಯು ಪಾತ್ರಕ್ಕೆ ಅಮಿತಾಭ್ ಬಚ್ಚನ್ ಧ್ವನಿ ನೀಡಲಿದ್ದಾರೆ ಎಂಬ ವದಂತಿ ಇತ್ತು. ಆದರೆ ಈ ಸುದ್ದಿ ಸುಳ್ಳಾಗಿದೆ. ಹಿರಿಯ ನಟ ಅನುಪಮ್ ಖೇರ್ ಜಟಾಯು ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ. ಕಾಮಿಕ್ ಬುಕ್‌ನಲ್ಲಿ ಈ ವಿಷಯ ಅಧಿಕೃತವಾಗಿದೆ. ಜಟಾಯು ಮತ್ತು ರಾವಣನ ನಡುವಿನ ಯುದ್ಧ ಸಿನಿಮಾದಲ್ಲಿ ಅತ್ಯಂತ ರೋಮಾಂಚನಕಾರಿಯಾಗಿ ಮೂಡಿಬಂದಿದೆ ಎಂದು ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದಂಡೇ ಜಮಾಯಿಸಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಸೀತಾ ಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಇನ್ನು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಲಿದ್ದಾರೆ. ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ವೇದಿಕೆಯಲ್ಲಿ ಯಶ್ ಹವಾ ಕಂಡು ದಂಗಾದ ಬಾಲಿವುಡ್ ಮಂದಿ
ಉಳಿದಂತೆ ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ಕೌಸಲ್ಯೆಯಾಗಿ ಇಂದಿರಾ ಕೃಷ್ಣನ್ ಮತ್ತು ಕೈಕೇಯಿಯಾಗಿ ಲಾರಾ ದತ್ತಾ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ನಟಿಸುತ್ತಿದ್ದಾರೆ. ಭರತನಾಗಿ ಆದಿನಾಥ್ ಕೊಠಾರೆ ಮತ್ತು ಶತ್ರುಘ್ನನಾಗಿ ನಿತೀಶ್ ಶರ್ಮಾ ಬಣ್ಣ ಹಚ್ಚಿದ್ದಾರೆ. ವಿಭೀಷಣನ ಪಾತ್ರದಲ್ಲಿ ಹರೀಶ್ ಉತ್ತಮನ ಹಾಗೂ ಕುಂಭಕರ್ಣನಾಗಿ ಫೈಸಲ್ ಮಲಿಕ್ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ತಾರಾಗಣ ಹೊಂದಿದ ಹೆಮ್ಮೆಯ ಚಿತ್ರವಾಗಲಿದೆ.
