ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಐರ್ಲೆಂಡ್ (Afghanistan vs Ireland) ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ತಂಡ ಈಗಾಗಲೇ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇಂದು ನಡೆದ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 343 ರನ್ ಕಲೆಹಾಕಿತು. ತಂಡದ ಪರ ಇಬ್ರಾಹಿಂ ಜದ್ರಾನ್ 107 ರನ್ಗಳ ಇನ್ನಿಂಗ್ಸ್ ಆಡಿದರೆ, ಸೇದಿಕುಲ್ಲಾ ಅಟಲ್ (Sediqullah Atal) ಕೂಡ ಅತ್ಯಧಿಕ 143 ರನ್ಗಳ ಇನ್ನಿಂಗ್ಸ್ ಆಡಿದರು. ಇಂದು ಸೇದಿಕುಲ್ಲಾ ಅಟಲ್ ಅವರ ಜನ್ಮ ದಿನವಾಗಿದ್ದು, ಈ ಶತಕ ಮತ್ತಷ್ಟು ವಿಶೇಷವಾಗಿದೆ. ಅಷ್ಟೇ ಇಲ್ಲದೆ ತಮ್ಮ ಜನ್ಮ ದಿನದಂದೇ ಈ ಶತಕದ ಇನ್ನಿಂಗ್ಸ್ ಆಡುವ ಮೂಲಕ ಸೇದಿಕುಲ್ಲಾ ಅಟಲ್ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
2ನೇ ವಿಕೆಟ್ಗೆ ದ್ವಿಶತಕದ ಜೊತೆಯಾಟ
ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಹ್ಮಾನುಲ್ಲಾ ಗುರ್ಬಾಜ್ 12 ರನ್ಗಳಿಗೆ ಔಟಾದರು. ಆ ನಂತರ ಜೊತೆಯಾದ ಇಬ್ರಾಹಿಂ ಜದ್ರಾನ್ ಮತ್ತು ಸೇದಿಕುಲ್ಲಾ ಅಟಲ್ ಎರಡನೇ ವಿಕೆಟ್ಗೆ ದಾಖಲೆಯ ದ್ವಿಶತಕದ ಜೊತೆಯಾಟ ಕಟ್ಟಿದರು. ಇದೇ ಹಂತದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅದ್ಭುತ ಶತಕಗಳನ್ನು ಬಾರಿಸಿದರು. ಅದರಲ್ಲೂ ಬರ್ತ್ ಡೇ ಬಾಯ್ ಸೇದಿಕುಲ್ಲಾ ಅಟಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ (143) ಅನ್ನು ದಾಖಲಿಸಿದರು.
ವಿಶ್ವ ದಾಖಲೆ ಬರೆದ ಸೇದಿಕುಲ್ಲಾ ಅಟಲ್
ಈ ಶತಕದೊಂದಿಗೆ ಸೇದಿಕುಲ್ಲಾ ಅಟಲ್ ವಿಶ್ವ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು 143 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಹುಟ್ಟುಹಬ್ಬದಂದು ಅತಿದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರನೆಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ 140 ರನ್ ಬಾರಿಸಿದ್ದ ನ್ಯೂಜಿಲೆಂಡ್ನ ಟಾಮ್ ಲೇಥಮ್ ಅವರ ಹೆಸರಿನಲ್ಲಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಜನ್ಮ ದಿನದಂದು 134 ರನ್ಗಳ ಇನ್ನಿಂಗ್ಸ್ ಆಡಿದ್ದರು.
ಇತಿಹಾಸದ ಪುಟಗಳಲ್ಲಿ ದಾಖಲಾಯ್ತು ಸ್ಕಾಟ್ಲೆಂಡ್ vs ಕೆನಡಾ ಏಕದಿನ ಪಂದ್ಯ
7ನೇ ಶತಕ ಬಾರಿಸಿದ ಇಬ್ರಾಹಿಂ ಜದ್ರಾನ್
ಇನ್ನು ಆರಂಭಿಕ ಇಬ್ರಾಹಿಂ ಜದ್ರಾನ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ತಮ್ಮ ವೃತ್ತಿಜೀವನದ ಏಳನೇ ಶತಕವನ್ನು ಬಾರಿಸಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಅಫ್ಘಾನ್ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಹಜಾದ್ ಅವರನ್ನು ಹಿಂದಿಕ್ಕಿದರು. ಒಂಬತ್ತು ಶತಕಗಳನ್ನು ಬಾರಿಸಿರುವ ರಹಮಾನಲ್ಲಾ ಗುರ್ಬಾಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಈ ಇನ್ನಿಂಗ್ಸ್ ಮೂಲಕ ಇಬ್ರಾಹಿಂ ಜದ್ರಾನ್ 2,000 ಏಕದಿನ ರನ್‌ಗಳನ್ನು ಪೂರೈಸಿದರು. ಜದ್ರಾನ್ ಕೇವಲ 45 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
