Headlines

ಜಮ್ಮು-ಕಾಶ್ಮೀರದಲ್ಲಿ ಬಸ್ ಅಪಘಾತ: 39 ಅಮರನಾಥ ಯಾತ್ರಿಕರಿಗೆ ಗಾಯ, ಪವಾಡದಂತೆ ಪಾರಾದ ಜನ – Kannada News | Amarnath Yatra Bus Mishap Leaves 39 Pilgrims Injured in Jammu and Kashmir

ಶ್ರೀನಗರ,ಜುಲೈ 28: ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು, ಪವಿತ್ರ ಅಮರನಾಥ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಮನೆಗೆ ಉರುಳಿದ ಪರಿಣಾಮ 39 ಯಾತ್ರಿಕರು ಗಾಯಗೊಂಡಿದ್ದಾರೆ.ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಬಸ್ ಹತ್ತಿರದಲ್ಲೇ ಹರಿಯುತ್ತಿದ್ದ ಸಿಂಧ್ ನದಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಭಾರಿ ಪ್ರಾಣಾಪಾಯ ಹಾಗೂ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅಪಘಾತದ ಸಮಯದಲ್ಲಿ ಮನೆಯೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಘಟನೆ ತಿಳಿದ ತಕ್ಷಣವೇ ಸ್ಥಳೀಯ ನಿವಾಸಿಗಳು, ಜಮ್ಮು-ಕಾಶ್ಮೀರ ಪೊಲೀಸರು, ಐಟಿಬಿಪಿ , ಸಿಆರ್‌ಪಿಎಫ್ ಹಾಗೂ ಭಾರತೀಯ ಸೇನೆಯ ಪಡೆಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳು ಹಾಗೂ ‘ಸ್ಕಿಮ್ಸ್’ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಅವರು ಗಂಡೇರ್‌ಬಾಲ್ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಗಾಯಾಳುಗಳ ಸ್ಥಿತಿಗತಿಯನ್ನು ವಿಚಾರಿಸಿದ್ದಾರೆ.

ಪೋಸ್ಟ್​

ಗಾಯಗೊಂಡ ಯಾತ್ರಿಕರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಲು ಸೂಚಿಸಿದ್ದೇನೆ. ಗಾಯಗೊಂಡ ಭಕ್ತರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿನ್ಹಾ ತಿಳಿಸಿದ್ದಾರೆ. ಜುಲೈ 2 ರಂದು ಪ್ರಾರಂಭವಾದ ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 4.15 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಹಿಮಲಿಂಗದ ದರ್ಶನ ಪಡೆದಿದ್ದಾರೆ. 57 ದಿನಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆಯು ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *