‘ಜವಾನ್ 2’ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರಾ ಶಾರುಖ್ ಖಾನ್ ಮತ್ತು ಅಟ್ಲಿ? – Kannada News | Shah Rukh Khan and Atlee to reunite for Jawan 2 latest updates

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಸದ್ಯ ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. 2024ರಲ್ಲಿ ತೆರೆಕಂಡ ‘ಪಠಾಣ್’ ಸಿನಿಮಾ ವಿಶ್ವದಾದ್ಯಂತ 1055 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆಯಿತು. ಅದರ ಬೆನ್ನಲ್ಲೇ ಬಂದ ‘ಜವಾನ್’ ಸಿನಿಮಾ 1100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಈಗ ಬರುತ್ತಿರುವ ಲೇಟೆಸ್ಟ್ ವರದಿಗಳ ಪ್ರಕಾರ, ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲಿ ಮತ್ತು ಶಾರುಖ್ ಖಾನ್ ಅವರು ‘ಜವಾನ್ 2′ (Jawan 2) ಚಿತ್ರಕ್ಕಾಗಿ ಮತ್ತೆ ಕೈಜೋಡಿಸಲು ಸಜ್ಜಾಗಿದ್ದಾರೆ.

‘ಇಂಡಿಯಾ ಟುಡೇ’ ವರದಿಯ ಪ್ರಕಾರ, ‘ಜವಾನ್ 2’ ಚಿತ್ರದ ಕಥೆ ಮತ್ತು ಐಡಿಯಾ ಬಗ್ಗೆ ಕಳೆದ ಕೆಲವು ಸಮಯದಿಂದ ಕೆಲಸ ನಡೆಯುತ್ತಿತ್ತು. ಕೆಲವು ವಾರಗಳ ಹಿಂದೆಯಷ್ಟೇ ಚಿತ್ರದ ಸ್ಕ್ರಿಪ್ಟ್ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಶಾರುಖ್ ಖಾನ್ ಸದ್ಯ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮುಗಿದ ನಂತರ ಅಟ್ಲಿ ನಿರ್ದೇಶನದ ‘ಜವಾನ್ 2’ ಕೆಲಸಗಳನ್ನು ಆರಂಭಿಸಲಿದ್ದಾರೆ ಎನ್ನಲಾಗಿದೆ.

‘ಜವಾನ್’ ಸಿನಿಮಾದಲ್ಲಿ ತಮಿಳು ನಟ ವಿಜಯ್ ಸೇತುಪತಿ ವಿಲನ್ ಆಗಿ ಅಬ್ಬರಿಸಿದ್ದರು. ಈಗ ಸೀಕ್ವೆಲ್‌ಗಾಗಿ ಅಟ್ಲಿ ಅವರು ಮತ್ತೊಬ್ಬ ದಕ್ಷಿಣ ಭಾರತದ ಖ್ಯಾತ ನಟನನ್ನು ಖಳನಾಯಕನನ್ನಾಗಿ ಕರೆತರಲು ಆಲೋಚಿಸಿದ್ದಾರೆ. ‘ತಂಡವು ದಕ್ಷಿಣದ ಒಬ್ಬ ದೊಡ್ಡ ಸ್ಟಾರ್ ನಟನನ್ನು ವಿಲನ್ ಪಾತ್ರಕ್ಕೆ ಆಯ್ಕೆ ಮಾಡಲು ಹುಡುಕಾಟ ನಡೆಸುತ್ತಿದೆ’ ಎಂದು ಮೂಲಗಳು ಹೇಳಿವೆ. ಆದರೆ, ಈ ಬಗ್ಗೆ ಶಾರುಖ್ ಖಾನ್ ಆಗಲಿ ಅಥವಾ ಅಟ್ಲಿ ಆಗಲಿ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.

ಶಾರುಖ್ ಖಾನ್ ಪಾಲಿಗೆ ‘ಜವಾನ್’ ಬಹಳ ವಿಶೇಷ ಸಿನಿಮಾ ಆಗಿತ್ತು. ಆ ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ದೀಪಿಕಾ ಪಡುಕೋಣೆ ಆ ಚಿತ್ರದ ತಾರಾಗಣದಲ್ಲಿದ್ದರು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಆ ಸಿನಿಮಾ ಭರ್ಜರಿ ಪ್ರತಿಕ್ರಿಯೆ ಪಡೆದಿತ್ತು. ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತಂದುಕೊಟ್ಟಿತು.

ಇದನ್ನೂ ಓದಿ: ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಜವಾನ್’ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಒಲಿದಿದ್ದವು. ಶಾರುಖ್ ಖಾನ್ ಅವರು ತಮ್ಮ 33 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ಇದೇ ಸಿನಿಮಾದಿಂದ. ಹಾಗೆಯೇ ಶಿಲ್ಪಾ ರಾವ್ ಅವರು ‘ಚಲೇಯಾ’ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *