ಕನ್ನಡ ಚಿತ್ರರಂಗದ ಹೆಸರಾಂತ ಗಾಯಕಿ ಅನುರಾಧಾ ಭಟ್ ಇತ್ತೀಚೆಗೆ ತಮಗೆ ಎದುರಾದ ಸಾರ್ವಜನಿಕ ಟೀಕೆಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಡೆದ ಗಾನಕೋಗಿಲೆ ಜಾನಕಿ ಅಮ್ಮನವರ (S Janaki) ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಈ ಕುರಿತು ಸುದೀರ್ಘ ಪೋಸ್ಟ್ ಬರೆದಿರುವ ಅನುರಾಧಾ, ಟೀಕಾಕಾರರ ಸೌಜನ್ಯ ಹಾಗೂ ಸಂಸ್ಕಾರವನ್ನು ಖಡಕ್ ಪದಗಳಲ್ಲಿ ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ತಾವು ಯಾವುದೇ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅನುರಾಧಾ ಭಟ್, ಈ ಬಾರಿ ತಮ್ಮ ಗುರುಸ್ಥಾನದಲ್ಲಿರುವ ಜಾನಕಿ ಅಮ್ಮನವರ ವಿಷಯ ಬಂದಿದ್ದಕ್ಕೆ ಮೌನ ಮುರಿದಿರುವುದಾಗಿ ಹೇಳಿದ್ದಾರೆ. ‘ಮೈಸೂರಿನಲ್ಲಿ ನಡೆದ ಜಾನಕಿ ಅಮ್ಮನವರ 12ನೇ ದಿನದ ಪುಣ್ಯಸ್ಮರಣೆ ಮತ್ತು ಸಂಗೀತ ನಮನ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಕೆಲವರು ತಮ್ಮ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಪ್ರಶ್ನಿಸುತ್ತಿರುವುದು ಅತ್ಯಂತ ಬೇಜವಾಬ್ದಾರಿಯುತ ಹಾಗೂ ವಿಷಾದನೀಯ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ‘ಮೆಟ್ಟಲ್ಲಿ ಹೊಡಿಬೇಕು’, ‘ವೇದಿಕೆ ಹತ್ತೋಕೆ ಬಿಡಬಾರದು’ ಎಂಬಂತಹ ಅತಿ ನಿಕೃಷ್ಟ ಮಾತುಗಳನ್ನು ಆಡಲಾಗಿದೆ ಎಂದು ಅನುರಾಧಾ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ಅನಿವಾರ್ಯ ಕಾರಣಗಳಿಂದಾಗಿ ತಮಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ದುಃಖ, ಪ್ರೀತಿ ಮತ್ತು ಗೌರವವನ್ನು ಕೇವಲ ಅಂತ್ಯಸಂಸ್ಕಾರದ ಹಾಜರಾತಿಯಿಂದಾಗಲಿ ಅಥವಾ ಫೇಸ್‌ಬುಕ್ ಫೋಟೋಗಳಿಂದಾಗಲಿ ಅಳೆಯಲು ಸಾಧ್ಯವಿಲ್ಲ ಎಂದು ಅವರು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಈ ಸಂಗೀತ ನಮನ ಕಾರ್ಯಕ್ರಮವನ್ನು ‘ಟಿಆರ್ಪಿ’ ಅಥವಾ ಹಣಕ್ಕಾಗಿ ಮಾಡಿದ ನಾಟಕ ಎಂದು ಬಿಂಬಿಸುತ್ತಿರುವವರ ವಿರುದ್ಧ ಕಿಡಿಕಾರಿರುವ ಅವರು, ‘ಅಂದು ಭಾಗವಹಿಸಿದ ಯಾವುದೇ ಗಾಯಕರು ಕನಿಷ್ಠ ಒಂದು ರೂಪಾಯಿಯನ್ನೂ ಸಂಭಾವನೆಯಾಗಿ ಪಡೆದಿಲ್ಲ. ಕೇವಲ ಪ್ರೀತಿಯಿಂದ ಸಂಗೀತ ಸೇವೆ ಸಲ್ಲಿಸಿದ್ದೇವೆ’ ಎಂದು ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಜಾನಕಿ ಅಮ್ಮನವರ ಅಮರ ಗೀತೆಗಳನ್ನು ತಾವು ಮುಂದೆಯೂ ಅತ್ಯಂತ ಹೆಮ್ಮೆಯಿಂದ ಹಾಡುವುದಾಗಿ ಮತ್ತು ಅದಕ್ಕಾಗಿ ಯಾರ ಮುಂದೆಯೂ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಎಸ್. ಜಾನಕಿ ನಿಧನದ ಬೆನ್ನಲ್ಲೇ ಮೊಮ್ಮಗಳಿಗೆ ಟ್ರೋಲ್ ಕಾಟ; ಕಣ್ಣೀರು ಹಾಕಿಲ್ಲ ಎಂದವರಿಗೆ ಅಪ್ಸರಾ ಸ್ಪಷ್ಟನೆ
‘ತಮ್ಮನ್ನು ಜಾನಕಿ ಅಮ್ಮನವರ ಅಭಿಮಾನಿಗಳು ಎಂದು ಕರೆದುಕೊಳ್ಳುವವರು, ಅವರ ಹೆಸರಿನಲ್ಲಿ ಮತ್ತೊಬ್ಬರನ್ನು ಅವಮಾನಿಸುವ ಮೊದಲು ಜಾನಕಿ ಅಮ್ಮನವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ’ ಎಂದು ಅನುರಾಧಾ ಭಟ್ ಕಿವಿಮಾತು ಹೇಳಿದ್ದಾರೆ. ಕೆಲವು ಬಾಂಧವ್ಯಗಳು ಸಾಮಾಜಿಕ ಜಾಲತಾಣಗಳ ಪ್ರದರ್ಶನಕ್ಕಲ್ಲ, ಅವು ಹೃದಯದಲ್ಲಿ ಉಳಿಯುವಂಥವು ಎಂದು ಬರೆಯುವ ಮೂಲಕ ತಮ್ಮ ಭಾವನಾತ್ಮಕ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.
ಪ್ರಶ್ನೆ: ಎಸ್ ಜಾನಕಿ ನಿಧನ ಹೊಂದಿದ್ದು ಯಾವಾಗ?
ಉತ್ತರ: ಜುಲೈ 11
ಪ್ರಶ್ನೆ: ಎಸ್ ಜಾನಕಿ ನಿಧನ ಹೊಂದಿದ್ದು ಹೇಗೆ?
ಉತ್ತರ: ಹೃದಯಾಘಾತದಿಂದ
ಪ್ರಶ್ನೆ: ಎಸ್ ಜಾನಕಿ ಅವರಿಗೆ ಎಷ್ಟು ವಯಸ್ಸಾಗಿತ್ತು?
ಉತ್ತರ: 88 ವರ್ಷ
