ಜಿಂಬಾಬ್ವೆ ವಿರುದ್ಧ ಗೆದ್ದರೂ ಮೇಲೇಳದ ಟೀಂ ಇಂಡಿಯಾ ಸೆಮಿಫೈನಲ್‌ ತಲುಪುವುದು ಹೇಗೆ? – Kannada News | Team India’s T20 World Cup Semis Path: Beat WI After Zimbabwe Win to Qualify!

2026 ರ ಟಿ20 ವಿಶ್ವಕಪ್‌ನ (T20 World Cup 2026) ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ ತಂಡವನ್ನು 72 ರನ್​ಗಳಿಂದ ಮಣಿಸಿದ ಟೀಂ ಇಂಡಿಯಾ ತನ್ನ ಸೆಮಿಫೈನಲ್‌ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 256 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್​ಗೇರುವ ಅವಕಾಶವನ್ನು ಹೊಂದಿದೆಯಾದರೂ, ಪಾಯಿಂಟ್ ಪಟ್ಟಿಯಲ್ಲಿ ಮಾತ್ರ ಮೂರನೇ ಸ್ಥಾನದಲ್ಲೇ ಉಳಿದಿದೆ. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡ 3ನೇ ಸ್ಥಾನದಲ್ಲಿದ್ದರೂ, ಸೆಮಿಫೈನಲ್​ಗೆ ಸುಲಭವಾಗಿ ಅರ್ಹತೆ ಪಡೆಯುವ ಅವಕಾಶ ಹೊಂದಿದೆ. ಹಾಗಿದ್ದರೆ, ಭಾರತ ಸೆಮಿಫೈನಲ್​ಗೇರಬೇಕೆಂದರೆ ಏನು ಮಾಡಬೇಕು? ವಿವರ ಇಲ್ಲಿದೆ.

ಭಾರತ ಸೆಮಿಫೈನಲ್ ತಲುಪುವುದು ಹೇಗೆ?

ದಕ್ಷಿಣ ಆಫ್ರಿಕಾ ಈಗಾಗಲೇ ಗುಂಪು 1 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಿಂದ ನಿರ್ಧರಿಸಲಾಗುತ್ತದೆ. ಟೀಂ ಇಂಡಿಯಾ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಸೂರ್ಯಕುಮಾರ್ ಪಡೆ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೆ ದಾಕು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಈ ಗೆಲುವಿನೊಂದಿಗೆ ಭಾರತ 4 ಅಂಕ ಪಡೆಯುವ ಮೂಲಕ ಗುಂಪು 1 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ ಟಿಕೆಟ್ ಖಚಿತ ಪಡಿಸಿಕೊಳ್ಳುತ್ತದೆ.

IND vs ZIM: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ

ಟಿ20 ವಿಶ್ವಕಪ್‌ನಲ್ಲಿ ದಾಖಲೆ ಹೇಗಿದೆ?

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯಗಳ ದಾಖಲೆ ನಿಜಕ್ಕೂ ಅದ್ಭುತವಾಗಿದೆ. ವಾಸ್ತವವಾಗಿ, ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ, ವೆಸ್ಟ್ ಇಂಡೀಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಆದ್ದರಿಂದ, ಈ ಪಂದ್ಯವು ಟೀಂ ಇಂಡಿಯಾಕ್ಕೆ ಸುಲಭವಲ್ಲ. 2014 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಮ್ಮೆ ಮಾತ್ರ ಟೀಂ ಇಂಡಿಯಾ ಗೆಲುವು ಸಾಧಿಸಿದೆ. 2016 ರಲ್ಲಿ ನಡೆದಿದ್ದ ಕೊನೆಯ ಮುಖಾಮುಖಿಯಲ್ಲಿ ವೆಸ್ಟ್ ಇಂಡೀಸ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಆದ್ದರಿಂದ, ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತ ತಂಡಕ್ಕೆ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:43 pm, Fri, 27 February 26

Source link

Leave a Reply

Your email address will not be published. Required fields are marked *