ನವದೆಹಲಿ, ಆಗಸ್ಟ್ 1: ಜುಲೈ ತಿಂಗಳ ಭಾರತದ ಜಿಎಸ್‌ಟಿ (GST) ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು. ಒಟ್ಟು ಜಿಎಸ್‌ಟಿ ಸಂಗ್ರಹ (Gross GST) ಜುಲೈನಲ್ಲಿ ಶೇ. 15.4ರಷ್ಟು ಹೆಚ್ಚಳವಾಗಿ ₹2.11 ಲಕ್ಷ ಕೋಟಿ ದಾಟಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್‌ಟಿ (Net GST) ಆದಾಯವೂ ಶೇ. 15.8ರಷ್ಟು ಏರಿಕೆಯಾಗಿ ₹1.81 ಲಕ್ಷ ಕೋಟಿ ತಲುಪಿದೆ. ಇಲ್ಲಿ ಶೇಕಡಾವಾರು ಏರಿಕೆಯು ವಾರ್ಷಿಕ ಲೆಕ್ಕಾಚಾರದಲ್ಲಿ ಇದೆ. ಅಂದರೆ, ಕಳೆದ ವರ್ಷದ ಜುಲೈನಲ್ಲಿ ಸಂಗ್ರಹಣೆ ಆಗಿದ್ದ ಜಿಎಸ್ಟಿಗೆ ಹೋಲಿಸಿದರೆ ಈ ಜುಲೈನಲ್ಲಿ ಆಗಿರುವ ತೆರಿಗೆ ಸಂಗ್ರಹದ ಹೆಚ್ಚಳ ಇದು.
ಜುಲೈ ತಿಂಗಳಲ್ಲಿ ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಸಂಗ್ರಹವು 10.1% ಹೆಚ್ಚಿ ₹1.44 ಲಕ್ಷ ಕೋಟಿ ಆಗಿದೆ. ಆಮದು ಮಾಡಿಕೊಂಡ ಸರಕುಗಳ ಮೇಲಿನ ಜಿಎಸ್‌ಟಿ ಸಂಗ್ರಹವಂತೂ 28.8% ನಷ್ಟು ಭಾರಿ ಏರಿಕೆ ಕಂಡು ₹66,511 ಕೋಟಿಗೆ ತಲುಪಿದೆ.
ಇದನ್ನೂ ಓದಿ: ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ
ಪ್ರಮುಖ ರಾಜ್ಯಗಳ ಜಿಎಸ್‌ಟಿ ವೃದ್ಧಿ ದರ
ದೇಶದ ಪ್ರಮುಖ ರಾಜ್ಯಗಳಲ್ಲಿ ಹರಿಯಾಣ ಅತ್ಯಂತ ವೇಗದ ಬೆಳವಣಿಗೆ ಕಂಡರೆ, ಮಹಾರಾಷ್ಟ್ರ ಮತ್ತು ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಂಡಿವೆ:
- ಮಹಾರಾಷ್ಟ್ರ: ₹32,210 ಕೋಟಿ (13% ಹೆಚ್ಚಳ)
- ಕರ್ನಾಟಕ: ₹13,854 ಕೋಟಿ (12% ಹೆಚ್ಚಳ)
- ಗುಜರಾತ್: ₹12,923 ಕೋಟಿ (19% ಹೆಚ್ಚಳ)
- ಹರಿಯಾಣ: ₹11,892 ಕೋಟಿ (25% ಹೆಚ್ಚಳ)
- ಉತ್ತರ ಪ್ರದೇಶ: ₹9,651 ಕೋಟಿ (15% ಹೆಚ್ಚಳ)
- ದೆಹಲಿ: ₹6,460 ಕೋಟಿ (8% ಹೆಚ್ಚಳ)
ಹಿನ್ನಡೆ ಕಂಡ ರಾಜ್ಯಗಳು: ಹಿಮಾಚಲ ಪ್ರದೇಶ (-22%), ಉತ್ತರಾಖಂಡ್ (-18%), ಆಂಧ್ರಪ್ರದೇಶ (-5%) ಮತ್ತು ತಮಿಳುನಾಡು (-1%) ರಾಜ್ಯಗಳು ಜಿಎಸ್‌ಟಿ ಸಂಗ್ರಹಣೆಯಲ್ಲಿ ಹಿಂದಿನ ವರ್ಷದಕ್ಕಿಂತ ಇಳಿಕೆ ದಾಖಲಿಸಿವೆ.
ಇದನ್ನೂ ಓದಿ: ಭಾರತದ ಕೈಗಾರಿಕಾ ಉತ್ಪಾದನೆಗೆ ಭರ್ಜರಿ ಬೂಸ್ಟ್: ಜೂನ್‌ನಲ್ಲಿ ಶೇ 7.3ಕ್ಕೆ ಏರಿಕೆ
ಪ್ರಸಕ್ತ ಹಣಕಾಸು ವರ್ಷದ ಒಟ್ಟು ಸಂಗ್ರಹ
ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ (April – July) ಒಟ್ಟು ಜಿಎಸ್‌ಟಿ ಸಂಗ್ರಹ 10.1% ಹೆಚ್ಚಾಗಿ ₹8.42 ಲಕ್ಷ ಕೋಟಿ ತಲುಪಿದೆ. ನಿವ್ವಳ ಜಿಎಸ್‌ಟಿ ಸಂಗ್ರಹ 9.2% ಹೆಚ್ಚಾಗಿ ₹7.21 ಲಕ್ಷ ಕೋಟಿ ತಲುಪಿದೆ.
ದೇಶೀಯ ಬೇಡಿಕೆ ಉತ್ತಮವಾಗಿರುವುದು ಮತ್ತು ಆಮದು ಚಟುವಟಿಕೆಗಳು ಚುರುಕಾಗಿರುವುದು ಈ ಭಾರಿ ಜಿಎಸ್‌ಟಿ ಸಂಗ್ರಹಣೆಗೆ ಪ್ರಮುಖ ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
