ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ ಎಂದೇ ಗುರುತಿಸಿಕೊಂಡಿರುವ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ಇನ್ನು ನಾಲ್ಕು ತಿಂಗಳಿಗಿಂತ ಕಡಿಮೆ ಸಮಯ ಬಾಕಿಯಿದೆ. ಈ ಚಿತ್ರದ ಮೇಲಿನ ಕ್ರೇಜ್ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗ ಸಿನಿಮಾ ತಂಡದಿಂದ ಒಂದು ಎಕ್ಸ್‌ಕ್ಲೂಸಿವ್ ಅಪ್‌ಡೇಟ್ ಸಿಕ್ಕಿದ್ದು, ಚಿತ್ರದ ಬಹುನಿರೀಕ್ಷಿತ ಟ್ರೇಲರ್ (Ramayana Trailer) ಇನ್ನು ಕೆಲವೇ ದಿನಗಳಲ್ಲಿ ಅಂದರೆ, ಜುಲೈ 18ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
3 ತಿಂಗಳು ಮುಂಚಿತವಾಗಿಯೇ ಟ್ರೇಲರ್ ರಿಲೀಸ್:
‘ಬಾಲಿವುಡ್ ಹಂಗಾಮಾ’ ಈ ಬಗ್ಗೆ ವರದಿ ಮಾಡಿದೆ. ಜಾಗತಿಕ ಸಿನಿಮಾಗಳ ಪ್ರಚಾರದ ಮಾದರಿಯನ್ನು ಅನುಸರಿಸಿ ‘ರಾಮಾಯಣ’ ಚಿತ್ರತಂಡ ಸಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದರೂ, ಸುಮಾರು ಮೂರೂವರೆ ತಿಂಗಳು ಮುಂಚಿತವಾಗಿಯೇ ಅಂದರೆ ಜುಲೈ 18ರಂದೇ ಅಧಿಕೃತ ಥಿಯೇಟ್ರಿಕಲ್ ಟ್ರೇಲರ್ ಅನಾವರಣಗೊಳಿಸಲು ನಿರ್ಧರಿಸಿದೆ. ಸಾಮಾನ್ಯವಾಗಿ ಕೊವಿಡ್ ನಂತರದ ದಿನಗಳಲ್ಲಿ ಸಿನಿಮಾಗಳ ಟ್ರೇಲರ್ ಕೇವಲ ಎರಡು ವಾರಗಳ ಮುಂಚೆ ಬಿಡುಗಡೆಯಾಗುತ್ತಿತ್ತು. ಆದರೆ ‘ರಾಮಾಯಣ’ ಚಿತ್ರತಂಡ ಹೊಸ ಟ್ರೆಂಡ್ ಸೃಷ್ಟಿಸಲು ಹೊರಟಿದೆ.
ಟೀಸರ್ ಬಳಿಕ ಟ್ರೇಲರ್ ಮೇಲೆ ನಿರೀಕ್ಷೆ:
ಕಳೆದ ವರ್ಷ ಜುಲೈ 3ರಂದೇ ಈ ಚಿತ್ರದ ಮೊದಲ ಝಲಕ್ ಬಿಡುಗಡೆ ಮಾಡಲಾಗಿತ್ತು. ನಂತರ ಈ ವರ್ಷದ ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ‘ರಾಮ’ ಹೆಸರಿನ ಟೀಸರ್ ರಿಲೀಸ್ ಮಾಡಿ ರಣಬೀರ್ ಕಪೂರ್ ಅವರ ಲುಕ್ ಪರಿಚಯಿಸಲಾಗಿತ್ತು. ಈ ಟೀಸರ್ ಈಗಾಗಲೇ ಭಾರಿ ಕೌತುಕ ಸೃಷ್ಟಿಸಿದ್ದು, ಈಗ ಬಿಡುಗಡೆಯಾಗಲಿರುವ ಟ್ರೇಲರ್ ಚಿತ್ರದ ಹೈಪ್ ಅನ್ನು ಮತ್ತಷ್ಟು ದುಪ್ಪಟ್ಟು ಮಾಡಲಿದೆ.
ಘಟಾನುಘಟಿ ಕಲಾವಿದರ ಪಾತ್ರವರ್ಗ:
‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಸೌತ್ ಸುಂದರಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ, ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಬಿಟ್ಟಿ ಪ್ರಚಾರಕ್ಕಾಗಿ ರಾಮಾಯಣ ಚಿತ್ರದಲ್ಲಿ ಕಳಪೆ ವಿಎಫ್‌ಎಕ್ಸ್’: ಸೆಟ್‌ಗೆ ಭೇಟಿ ನೀಡಿದ ಕ್ರಿಯೇಟರ್ ಆರೋಪ
ಈ ದೃಶ್ಯ ವೈಭವಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗವು ದೀಪಾವಳಿ ಹಬ್ಬಕ್ಕೆ ಪ್ರಪಂಚದಾದ್ಯಂತ ತೆರೆಕಾಣಲಿದೆ. ಎರಡನೇ ಭಾಗವು ಮುಂದಿನ ವರ್ಷ (2027) ದೀಪಾವಳಿಗೆ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
