ಜೂನ್ 12ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಅಕ್ಷಯ್ ಕುಮಾರ್ ಸಿನಿಮಾ ‘ಭೂತ್ ಬಂಗ್ಲ’ – Kannada News

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಹಿರಿಯ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್‌ನ ಹಾರರ್ ಕಾಮಿಡಿ ಚಿತ್ರ ‘ಭೂತ್ ಬಂಗ್ಲಾ’ (Bhooth Bangla) ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಈಗ ಈ ಸಿನಿಮಾ ಒಟಿಟಿ (OTT) ಅಂಗಳಕ್ಕೆ ಬರಲು ಸಜ್ಜಾಗಿದೆ. ಥಿಯೇಟರ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿ ಯಶಸ್ಸು ಕಂಡ ಈ ಸಿನಿಮಾ, ಜೂನ್ 12ರಿಂದ ಪ್ರಮುಖ ಒಟಿಟಿ ಸಂಸ್ಥೆಯಾದ ನೆಟ್‌ಫ್ಲಿಕ್ಸ್‌ ಮೂಲಕ ಡಿಜಿಟಲ್ ಪ್ರಸಾರ ಆರಂಭಿಸಲಿದೆ. ಇದರಿಂದ ಅಕ್ಷಯ್ ಕುಮಾರ್ (Akshay Kumar) ಅಭಿಮಾನಿಗಳು ಖುಷಿ ಆಗಿದ್ದಾರೆ.

ಏಪ್ರಿಲ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಭೂತ್ ಬಂಗ್ಲಾ’ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಆದಾಗ್ಯೂ, ಪ್ರೇಕ್ಷಕರು ಚಿತ್ರದ ಕಾಮಿಡಿ ಹಾಗೂ ಹಾರರ್ ಅಂಶ‌ಗಳನ್ನು ಮೆಚ್ಚಿಕೊಂಡಿದ್ದರಿಂದ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿತು. ಸುಮಾರು 120 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ, ವಿಶ್ವಾದ್ಯಂತ 246.55 ಕೋಟಿ ರೂ.ಗಳನ್ನು ಬಾಚಿಕೊಳ್ಳುವ ಮೂಲಕ 2026ರಲ್ಲಿ ಹೆಚ್ಚು ಗಳಿಕೆ ಮಾಡಿದ ಟಾಪ್ ಹಿಂದಿ ಸಿನಿಮಾಗಳ ಸಾಲಿಗೆ ಸೇರಿದೆ.

‘ಹೇರಾ ಫೇರಿ’ ಮತ್ತು ‘ಭೂಲ್ ಭುಲಯ್ಯ’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಜೋಡಿ, ಬರೋಬ್ಬರಿ 14 ವರ್ಷಗಳ ನಂತರ ಈ ಚಿತ್ರದ ಮೂಲಕ ಒಂದಾಗಿದೆ. ಮಂಗಳಪುರ ಎಂಬ ಕಾಲ್ಪನಿಕ ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಶಾಪಗ್ರಸ್ತ ಅರಮನೆ ಮತ್ತು ‘ವಧುಸೂರ್’ ಎಂಬ ರಾಕ್ಷಸನ ಸುತ್ತ ಸುತ್ತುತ್ತದೆ.

ಚಿತ್ರದಲ್ಲಿ ಪರೇಶ್ ರಾವಲ್, ಟಬು, ರಾಜ್‌ಪಾಲ್ ಯಾದವ್, ವಾಮಿಕಾ ಗಬ್ಬಿ, ಜಿಶು ಸೇನ್‌ಗುಪ್ತ, ಅಸ್ರಾನಿ, ಮನೋಜ್ ಜೋಶಿ ಮತ್ತು ಮಿಥಿಲಾ ಪಾಲ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್, ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರೀತಮ್ ಸಂಗೀತ ನೀಡಿದ್ದಾರೆ. ಸದ್ಯ ಒಟಿಟಿಯಲ್ಲಿ ಹಾರರ್ ಕಾಮಿಡಿ ಸಿನಿಮಾಗಳಿಗೆ ಭಾರಿ ಬೇಡಿಕೆ ಇರುವುದರಿಂದ, ನೆಟ್‌ಫ್ಲಿಕ್ಸ್‌ನಲ್ಲೂ ಈ ಸಿನಿಮಾ ದಾಖಲೆಯ ವೀಕ್ಷಣೆ ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: 1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಕಳೆದ ಕೆಲವು ವರ್ಷಗಳಿಂದ ಅಕ್ಷಯ್ ಕುಮಾರ್ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ ಹಿನ್ನಡೆಯಾಗಿತ್ತು. ಅವರು ನಟಿಸಿದ್ದ ‘ಬಡೆ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಹಾಗೂ ‘ಖೇಲ್ ಖೇಲ್ ಮೇ’ ಮುಂತಾದ ದೊಡ್ಡ ಬಜೆಟ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋತಿದ್ದವು. ಇದರಿಂದಾಗಿ ಅವರ ಮಾರುಕಟ್ಟೆ ಮೌಲ್ಯದ ಮೇಲೂ ಪರಿಣಾಮ ಬೀರಿತ್ತು. ಆದರೆ, ಈಗ ‘ಭೂತ್ ಬಂಗ್ಲಾ’ ಚಿತ್ರದ ಭರ್ಜರಿ ಯಶಸ್ಸು ಅಕ್ಷಯ್ ಕುಮಾರ್ ಅವರ ಕೆರಿಯರ್ ಗ್ರಾಫ್‌ಗೆ ಹೊಸ ಜೀವ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *