ಜೂ ಎನ್ಟಿಆರ್ (Jr NTR) ದಕ್ಷಿಣದ ಸ್ಟಾರ್ ನಟ. ಪವನ್ ಕಲ್ಯಾಣ್, ಪ್ರಭಾಸ್ ಅವರಂತೆ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ದಕ್ಷಿಣದಲ್ಲಿ ಹೊಂದಿರುವ ನಟ ಜೂ ಎನ್ಟಿಆರ್. ‘ಆರ್ಆರ್ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಸಿನಿಮಾ ‘ದೇವರ’ ದೊಡ್ಡ ಯಶಸ್ಸು ಕಾಣಲಿಲ್ಲವಾದರೂ ಫ್ಲಾಪ್ ಎನಿಸಿಕೊಳ್ಳಲಿಲ್ಲ. ಇದೀಗ ಅವರ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಜೂ ಎನ್ಟಿಆರ್ ಅಭಿಮಾನಿಗಳು ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಎತ್ತಿದ್ದರು. ಆದರೆ ಇದೀಗ ಜೂ ಎನ್ಟಿಆರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಖತ್ ಟ್ರೀಟ್ ಕೊಡಲು ಜೂ ಎನ್ಟಿಆರ್ ಸಜ್ಜಾಗಿದ್ದಾರೆ.
ಮೇ 20 ರಂದು ಜೂ ಎನ್ಟಿಆರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಆ ದಿನ ಅವರ ಮೂರು ಸಿನಿಮಾಗಳ ಅಪ್ಡೇಟ್ ಒಟ್ಟಿಗೆ ಸಿಗಲಿದೆ. ಪ್ರಶಾಂತ್ ನೀಲ್ ಜೊತೆಗೆ ನಟಿಸುತ್ತಿರುವ ಸಿನಿಮಾದ ಟೈಟಲ್ ಟೀಸರ್ ಅಂದು ಬಿಡುಗಡೆ ಆಗಲಿದೆ. ಈ ವರೆಗೆ ಆ ಸಿನಿಮಾವನ್ನು ಅಭಿಮಾನಿಗಳು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದರು, ಆದರೆ ಅದು ಸಿನಿಮಾದ ಅಧಿಕೃತ ಹೆಸರಾಗಿರಲಿಲ್ಲ. ಮೇ 20 ರಂದು ಸಿನಿಮಾದ ಹೆಸರು ಬಿಡುಗಡೆ ಮಾಡಲಿದೆ ಚಿತ್ರತಂಡ. ಅದೂ ಮೇ 19ರ ಮಧ್ಯರಾತ್ರಿ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಲಿರುವುದು ವಿಶೇಷ.
ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್ಟಿಆರ್ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್ಎಫ್
ಇನ್ನು ಮೇ 20ರಂದು ಜೂ ಎನ್ಟಿಆರ್ ನಟಿಸಲಿರುವ ‘ಗಾಡ್ ಆಫ್ ವಾರ್ಸ್’ ಸಿನಿಮಾದ ಘೋಷಣೆ ಆಗಲಿದೆ. ದೇವರು ಮುರುಗನ್ ಅಥವಾ ಕಾರ್ತಿಕೇಯ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಕಾರ್ತಿಕೇಯನನ್ನು ‘ಯುದ್ಧಗಳ ದೇವತೆ’ ಎಂದು ಸಹ ಕರೆಯಲಾಗುತ್ತದೆ. ಇದೀಗ ಜೂ ಎನ್ಟಿಆರ್ ಅವರು ಕಾರ್ತಿಕೇಯ ದೇವರ ಆಧರಿಸಿ ರಚಿಸಿದ ಕತೆಯನ್ನು ಆಧರಿಸಿದ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಜೂ ಎನ್ಟಿಆರ್ ಅವರ ಮೆಚ್ಚಿನ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಲಿದ್ದು, ಸಿನಿಮಾ ಘೋಷಣೆ ಮೇ 20ರಂದು ಅಧಿಕೃತವಾಗಿ ಆಗಲಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುತ್ತದೆ ಎನ್ನಲಾಗುತ್ತಿದೆ.
ಇನ್ನು ಜೂ ಎನ್ಟಿಆರ್ ಅವರ ಈ ಹಿಂದಿನ ಸಿನಿಮಾ ‘ದೇವರ’ದ ಸೀಕ್ವೆಲ್ ‘ದೇವರ 2’ ಬಗ್ಗೆಯೂ ಮೇ 20ರಂದೇ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ‘ದೇವರ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಗಳಾದರೂ ಸಹ ‘ದೇವರ 2’ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಹೊರಬಿದ್ದಿರಲಿಲ್ಲ. ‘ದೇವರ 2’ ನಿಂತು ಹೋಗಿದೆ, ಆ ಸಿನಿಮಾ ನಿರ್ಮಾಣ ಆಗುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಆದರೆ ಇದೀಗ ಮೇ 20ರಂದು ‘ದೇವರ 2’ ಬಗ್ಗೆ ಅಪ್ಡೇಟ್ ಸಿಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
