ಜೊತೆಗಿದ್ದವರೇ ಮೋಸ ಮಾಡಿದರು, ಆ ನಟನ ಮಾತು ಕೇಳಲಿಲ್ಲ: ಅರ್ಜುನ್ ಸರ್ಜಾ – Kannada News | Arjun Sarja emotional about financial loss and Sobhan Babu advice

ಈಗ ಎಲ್ಲರೂ ಆಕ್ಷನ್ ಕಿಂಗ್​​ಗಳೇ ಆದರೆ ಕೆಲ ದಶಕದ ಮುಂಚೆ ನಿಜವಾದ ‘ಆಕ್ಷನ್ ಕಿಂಗ್’ ಎಂದರೆ ಅರ್ಜುನ್ ಸರ್ಜಾ (Arjun Sarja) ಮಾತ್ರವೇ. ಚಿತ್ರರಂಗಕ್ಕೆ ಆಕ್ಷನ್​​ನಲ್ಲಿ ಭಿನ್ನತೆ ತಂದವರೇ ಅರ್ಜುನ್ ಸರ್ಜಾ. ತಮ್ಮ ಅದ್ಭುತ ಮೈಕಟ್ಟು, ಕರಾಟೆ ಪಟ್ಟುಗಳು ಜೊತೆಗೆ ಅದ್ಭುತ ನಟನೆಯ ಮೂಲಕ ಅರ್ಜುನ್ ಸರ್ಜಾ ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದಿದ್ದರು. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ತಮ್ಮ 46 ವರ್ಷಗಳ ವೃತ್ತಿ ಪಯಣದಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅರ್ಜುನ್ ಸರ್ಜಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ, ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಮ್ಮ 46 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕರು ತಮಗೆ ಹಲವು ರೀತಿಯಾಗಿ ವಂಚಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಸುತ್ತಮುತ್ತಲಿದ್ದವರೇ ನನ್ನನ್ನು ಮೋಸಗೊಳಿಸಿದರು. ಆ ಸಮಯದಲ್ಲಿ ನನಗೆ ಯಾವುದರ ಬಗ್ಗೆಯೂ ಅರಿವಿಲ್ಲದ ವಯಸ್ಸಾಗಿತ್ತು. ಬಹಳಷ್ಟು ಜನರು ನನ್ನನ್ನು ತಪ್ಪು ದಾರಿಗೆ ಎಳೆದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್: ವಿಡಿಯೋ

‘ಒಂದು ಸಮಯದಲ್ಲಿ ಬಹಳ ಸಂಪಾದನೆ ಮಾಡುತ್ತಿದ್ದೆ, ಸಂಪಾದನೆಯ ಸಮಯದಲ್ಲಿ ಸರಿಯಾದ ಕಡೆ ಹೂಡಿಕೆ ಮಾಡುವ ಬಗ್ಗೆ ಹಿರಿಯ ನಟ ಶೋಭನ್ ಬಾಬು ಅವರು ಹಲವಾರು ಬಾರಿ ಕಿವಿಮಾತು ಹೇಳಿದ್ದರು’ ಎಂಬುದನ್ನು ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ. ‘ಹಣವನ್ನು ವ್ಯರ್ಥ ಮಾಡಬೇಡ, ಜಾಗರೂಕತೆಯಿಂದ ಹೂಡಿಕೆ ಮಾಡು ಎಂದು ಶೋಭನ್ ಬಾಬು ಅವರು ಆಗಾಗ್ಗೆ ಎಚ್ಚರಿಸುತ್ತಿದ್ದರು. ಆದರೆ ಅಂದು ಅವರ ಮಾತುಗಳು ನನಗೆ ಅರ್ಥವಾಗಿರಲಿಲ್ಲ. ಅವರ ಮಾತನ್ನು ಕೇಳಿದ್ದಿದ್ದರೆ ಇಂದು ನನ್ನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು ಮತ್ತು ನನ್ನ ಮಕ್ಕಳಿಗಾಗಿ ದೊಡ್ಡ ಆಸ್ತಿಯನ್ನು ಉಳಿಸಬಹುದಿತ್ತು’ ಎಂದು ಅವರು ಪಶ್ಚಾತ್ತಾಪ ಪಟ್ಟಿದ್ದಾರೆ.

ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಇವರು, ಪ್ರಸ್ತುತ ‘ಸೀತಾ ಪಯಣ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಪುತ್ರಿ ಐಶ್ವರ್ಯ ಸರ್ಜಾ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಿರ್ಮಾಣವನ್ನು ಸಹ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *