ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಹಠಾತ್ತನೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಉತ್ತರ ಭಾರತದ ಕೆಲವು ಇನ್ಸ್ಟಾಗ್ರಾಂ ಸಿನಿಮಾ ವಿಮರ್ಶಕರು, ಕೆಲ ಮಾಧ್ಯಮಗಳು, ‘ಧುರಂಧರ್ 2’ ಸಿನಿಮಾಕ್ಕೆ ಹೆದರಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಸಹ ಹೇಳುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಬೇಕೆಂಬ ಒತ್ತಡ ಯಶ್ ಹಾಗೂ ಸಿನಿಮಾದ ನಿರ್ಮಾಪಕರ ಮೇಲಿತ್ತು ಎನ್ನಲಾಗುತ್ತಿದೆ.
‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡುವಂತೆ ಯಶ್ ಹಾಗೂ ನಿರ್ಮಾಪಕ ವೆಂಕಟ್ ಮೇಲೆ ಒತ್ತಡ ಇತ್ತು ಎನ್ನಲಾಗುತ್ತಿದೆ. ಈ ಒತ್ತಡ ‘ಧುರಂಧರ್ 2’ ಕಡೆಯಿಂದ ಅಲ್ಲ ಬದಲಿಗೆ ‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ವಿತರಕರುಗಳಿಂದ. ಅದರಲ್ಲೂ ವಿಶೇಷವಾಗಿ ‘ಟಾಕ್ಸಿಕ್’ ಸಿನಿಮಾದ ಉತ್ತರ ಭಾರತ ವಿತರಣೆ ಹಕ್ಕು ಪಡೆದವರು ಹಾಗೂ ವಿದೇಶ ವಿತರಣೆ ಹಕ್ಕು ಪಡೆದವರ ಸತತ ಒತ್ತಡದಿಂದಾಗಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯನ್ನು ಒಲ್ಲದ ಮನಸ್ಸಿನಿಂದ ಮುಂದೂಡಲಾಯ್ತು ಎನ್ನಲಾಗುತ್ತಿದೆ.
ಉತ್ತರ ಭಾರತದಲ್ಲಿ ಹಿಂದಿ ಸಿನಿಮಾ ಆದ ‘ಧುರಂಧರ್ 2’ಗೆ ಸಹಜವಾಗಿಯೇ ಹೆಚ್ಚು ಶೋಗಳು ಸಿಗಲಿದ್ದವು. ‘ಧುರಂಧರ್ 2’ ಜೊತೆಗೆ ‘ಟಾಕ್ಸಿಕ್’ ಬಿಡುಗಡೆ ಆಗಿದ್ದರೆ ‘ಟಾಕ್ಸಿಕ್’ಗೆ ಉತ್ತರ ಭಾರತದಲ್ಲಿ 30% ಸ್ಕ್ರೀನ್ಗಳು ಮಾತ್ರವೇ ಸಿಗುತ್ತಿದ್ದವಂತೆ. ಇದು ವಿತರಕರಿಗೆ ಭಾರಿ ನಷ್ಟ ಉಂಟು ಮಾಡುತ್ತಿತ್ತು. ಅಲ್ಲದೆ ಸೌದಿ ರಾಷ್ಟ್ರಗಳಲ್ಲಿ ಹಾಗೂ ಇತರೆ ಕೆಲವು ದೇಶಗಳಲ್ಲಿ ಸಿನಿಮಾ ಬಿಡುಗಡೆಯೇ ಅಸಾಧ್ಯವಾಗಿದೆ. ಹಾಗಾಗಿ ವಿದೇಶಿ ಬಿಡುಗಡೆ ಹಕ್ಕು ಪಡೆದವರು ಸಹ ‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆಗೆ ಒತ್ತಡ ಹೇರಿದ್ದರು. ವಿತರಕರ ಒತ್ತಡ ಮತ್ತು ಅವರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ
‘ಧುರಂಧರ್ 2’ ಸಿನಿಮಾವನ್ನು ದಕ್ಷಿಣದಲ್ಲಿ ಎದುರಿಸುವುದು ‘ಟಾಕ್ಸಿಕ್’ಗೆ ಕಷ್ಟವೇನೂ ಆಗುತ್ತಿರಲಿಲ್ಲ, ಆದರೆ ಉತ್ತರ ಭಾರತದ ಹಾಗೂ ವಿದೇಶದಲ್ಲಿ ‘ಧುರಂಧರ್ 2’ ಜೊತೆಗೆ ಸ್ಪಷ್ಟ ಸ್ಪರ್ಧೆ ಇತ್ತು. ಈ ಸ್ಪರ್ಧೆಯಿಂದ ಎರಡೂ ಸಿನಿಮಾಗಳಿಗೂ ಸಮಾನ ನಷ್ಟ ಆಗುತ್ತಿತ್ತು. ಆದರೆ ‘ಧುರಂಧರ್’ ಸಿನಿಮಾ ಈಗಾಗಲೇ 1300 ಕೋಟಿಗೂ ಹೆಚ್ಚು ಬಾಚಿಕೊಂಡಿದ್ದು, ‘ಧುರಂಧರ್ 2’ ಫ್ಲಾಪ್ ಆದರೂ ಅವರಿಗೆ ನಷ್ಟವಿಲ್ಲ. ಆದರೆ ‘ಟಾಕ್ಸಿಕ್’ಗೆ ಹಾಗಾಗದು. ಹಾಗಾಗಿ ಅನವಶ್ಯಕ ಸ್ಪರ್ಧೆಗೆ ಹೋಗಿ ಲಾಭ ಕಡಿಮೆ ಮಾಡಿಕೊಳ್ಳುವುದಕ್ಕಿಂತಲೂ ತುಸು ಪಕ್ಕಕ್ಕೆ ಸರಿದು ಆ ಬಳಿಕ ಒಳ್ಳೆಯ ಲಾಭ ಮಾಡಿಕೊಳ್ಳುವುದು ಜಾಣತನ ಎಂದು ‘ಟಾಕ್ಸಿಕ್’ ತಂಡ ನಿರ್ಧರಿಸಿದಂತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 3:46 pm, Thu, 5 March 26
