ಟಿಎಂಸಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ, ಎಚ್‌ಡಿಎಫ್‌ಸಿಗೆ ಟಿಎಂಸಿ ಪತ್ರ – Kannada News | TMC Freezes Bank Accounts: Rebels Feared to Loot Funds Amid Internal Crisis

ಕೋಲ್ಕತ್ತಾ , ಜೂನ್ 18: ಟಿಎಂಸಿ(TMC)ಯ ಬಂಡಾಯ ನಾಯಕರು ಹಣ ಲೂಟಿ ಮಾಡಬಹುದು, ಹಾಗಾಗಿ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ ಎಚ್​ಡಿಎಫ್​ಸಿಗೆ ತೃಣಮೂಲ ಕಾಂಗ್ರೆಸ್ ಪತ್ರ ಬರೆದಿದೆ. ಪಶ್ಚಿಮ ಬಂಗಾಳ ವಿಧಾನಸಬಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಮತ್ತು ಬಂಡಾಯ ಬಾವುಟ ಎದ್ದಿದೆ.

ಇದರ ನಡುವೆ ಬಂಡಾಯಗಾರರು ಪಕ್ಷದ ಬಹುಕೋಟಿ ನಿಧಿಯನ್ನು ಲೂಟಿ ಮಾಡಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು ಎಂಬ ಭೀತಿಯಿಂದ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೋಲ್ಕತ್ತಾದ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಟಿಎಂಸಿ ನಾಯಕರು ಪತ್ರ ಬರೆದಿದ್ದಾರೆ.

ಬ್ಯಾಂಕ್‌ಗೆ ಸಲ್ಲಿಕೆಯಾಗಿರುವ ಪತ್ರದ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ನಾಯಕತ್ವವು ತನ್ನ ಜನಪ್ರತಿನಿಧಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.
ಪಕ್ಷದ ಒಟ್ಟು 28 ಸಂಸದರಲ್ಲಿ ಕೇವಲ 8 ಸಂಸದರು ಮಾತ್ರ ಸದ್ಯ ನಾಯಕತ್ವದ ಜತೆಗಿದ್ದಾರೆ, ಉಳಿದ 20 ಸಂಸದರು ಬಂಡಾಯ ಬಣ ಸೇರಿದ್ದಾರೆ. ಪಕ್ಷದ ಒಟ್ಟು 60 ಶಾಸಕರಲ್ಲಿ ಕೇವಲ ಇಬ್ಬರು ಮಾತ್ರ ಮಮತಾ ಬಣದಲ್ಲಿದ್ದು, ಉಳಿದ 58 ಶಾಸಕರು ಬಂಡಾಯವೆದ್ದಿದ್ದಾರೆ.

ಮತ್ತಷ್ಟು ಓದಿ: ‘ಎನ್‌ಸಿಪಿಐ’ ಜೊತೆ 20 ಟಿಎಂಸಿ ಬಂಡಾಯ ಸಂಸದರ ವಿಲೀನ, ಸಂಸತ್ತಿನಲ್ಲಿ ಹೊಸ ಬಣದ ಉದಯ

ಪಕ್ಷದ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್ ಅವರು ಬ್ಯಾಂಕ್‌ಗೆ ಬರೆದಿರುವ ಪತ್ರದಲ್ಲಿ ಪ್ರಮುಖ ಕಳವಳಗಳನ್ನು ಹಂಚಿಕೊಂಡಿದ್ದಾರೆ: ಪಕ್ಷದ ದೈನಂದಿನ ಕಚೇರಿ ವೆಚ್ಚಗಳಿಗಾಗಿ ಟಿಎಂಸಿ ಪ್ರಧಾನ ಕಚೇರಿಯಲ್ಲಿ ಮೊದಲೇ ಸಹಿ ಮಾಡಿ ಇಡಲಾಗಿದ್ದ ಹಲವಾರು ಖಾಲಿ ಚೆಕ್‌ಗಳು (Blank Cheques) ಇವೆ. ಬಂಡಾಯಗಾರರು ಈ ಚೆಕ್‌ಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳಿಂದ ಹಣವನ್ನು ಅನಧಿಕೃತವಾಗಿ ಹಿಂಪಡೆಯಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು ಎಂಬ ತೀವ್ರ ಆತಂಕ ಪಕ್ಷದ ನಾಯಕತ್ವಕ್ಕಿದೆ.

ಪಕ್ಷದೊಳಗಿನ ಅಧಿಕಾರ ಮತ್ತು ನಾಯಕತ್ವದ ವಿವಾದ ಸಂಪೂರ್ಣವಾಗಿ ಬಗೆಹರಿಯುವವರೆಗೆ ಬ್ಯಾಂಕ್ ಖಾತೆಗಳಲ್ಲಿ ‘ಯಥಾಸ್ಥಿತಿ’ (Status Quo) ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಯಾವುದೇ ರೀತಿಯ ಹಣ ವರ್ಗಾವಣೆ, ಡೆಬಿಟ್ ವಹಿವಾಟುಗಳು ಅಥವಾ ಖಾತೆಯ ಕಾರ್ಯಾಚರಣೆಯ ಆದೇಶಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶ ನೀಡಬಾರದು ಎಂದು ಬ್ಯಾಂಕ್ ಅನ್ನು ಒತ್ತಾಯಿಸಲಾಗಿದೆ.

ಚುನಾವಣಾ ಸೋಲಿನ ನಂತರ ಜೂನ್ 5 ರಂದು ಮಮತಾ ಬ್ಯಾನರ್ಜಿ ಅವರು ಅರೂಪ್ ಬಿಸ್ವಾಸ್ ಅವರನ್ನು ಖಜಾಂಚಿ ಹುದ್ದೆಯಿಂದ ತೆಗೆದುಹಾಕಿ, ಸುಭಾಷಿಶ್ ಚಕ್ರವರ್ತಿ ಅವರನ್ನು ನೇಮಿಸಿದ್ದರು. ಆದರೆ ತುರ್ತು ಪರಿಸ್ಥಿತಿಯ ಕಾರಣ ಹಳೆಯ ಹುದ್ದೆಯ ಹೆಸರಿನಲ್ಲೇ ಈ ಪತ್ರ ವ್ಯವಹಾರ ನಡೆದಿದೆ ಎನ್ನಲಾಗಿದ್ದು, ಟಿಎಂಸಿ ಆಂತರಿಕ ಜಗಳ ಈಗ ಬ್ಯಾಂಕ್ ಅಂಗಳ ತಲುಪಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *