ಹಾವೇರಿ, (ಜುಲೈ 31): ಚಿತ್ರಮಂದಿರಗಳ ಬಳಿ ಮತ್ತು ಚಿತ್ರಮಂದಿರದ ಕೌಂಟರ್ನಲ್ಲಿ ನೀಡುವ ಟಿಕೆಟ್ಗಳನ್ನು ಹಾವೇರಿಯ ಪಡಿತರ ಅಂಗಡಿಯಲ್ಲಿ ”ಸರ್ಕಾರಿ ನ್ಯಾಯ ಬೆಲೆ ಅಂಗಡಿ”ಯ ಸಿನಿಮಾ ಟಿಕೆಟ್ (movie Tickets) ಮಾರಾಟ ಮಾಡಲಾಗಿದ್ದು, ಇದಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗಿವೆ. ಹೌದು…ಹಾವೇರಿಯ (Haveri) ಪಡಿತರ ಅಂಗಡಿಯಲ್ಲಿ `ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡಿಲಾಗಿದ್ದು, ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟಿವಿ9 ವಿಸೃತ ವರದಿ ಬೆನ್ನಲ್ಲೇ ಇದೀಗ ಎಚ್ಚೆತ್ತ ಆಹಾರ ಇಲಾಖೆ ನ್ಯಾಯಬೆಲೆ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟಕ್ಕೆ ಬ್ರೇಕ್ ಹಾಕಿದೆ. ಈ ಬಗ್ಗೆ ಹಾವೇರಿ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಡಿ.ಜೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಾವೇರಿ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಡಿ.ಜೆ,
ಸರ್ಕಾರಿ ನ್ಯಾಯ ಬೆಲೆ ಅಂಗಡಿ ಸಿನಿಮಾ ಟಿಕೆಟ್ ಮಾರಾಟ ಮಾಡಲು ಆದೇಶ ನೀಡಲಾಗಿತ್ತು.
ಅಂಗಡಿ ಮಾಲೀಕರಿಗೆ ಮೊದಲೇ ಹೇಳಿದ್ವಿ ಬಲವಂತವಾಗಿ ನೀಡಬಾರದು ಅಂತ. ಬಲವಂತವಾಗಿ ನೀಡಿದ ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಅಲ್ಲದೇ ಟಿಕೆಟ್ ವಾಪಸು ಪಡೆದು ಗ್ರಾಹಕರಿಗೆ ಹಣ ನೀಡಲು ಸೂಚನೆ ನೀಡಿದೆ. ಈ ಕುರಿತು ಆಯುಕ್ತರಿಗೆ ವರದಿ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪಡಿತರ ಅಂಗಡಿಗಳಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಟಿಕೆಟ್ ಮಾರಾಟ: ಆಹಾರ ಇಲಾಖೆ ನಿರ್ಧಾರಕ್ಕೆ ಆಕ್ಷೇಪ
ಪ್ರತಿಯೊಂದು ಪಡಿತರ ಅಂಗಡಿಯಲ್ಲಿ 50 ರಿಂದ100 ಟಿಕೆಟ್ ತೆಗೆದುಕೊಂಡಿದ್ದರು. 150 ರೂಪಾಯಿ ದರಕ್ಕೆ ಗ್ರಾಹಕರಿಗೆ ಮಾರಾಟ ಮಾಡಿದ್ದರು. ಸುದ್ದಿ ಬಂದ ನಂತರ ಪಡಿತರ ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಗ್ರಾಹಕರಿಗೆ ಸಿನಿಮಾ ಟಿಕೆಟ್ ಮಾರಾಟ ಮಾಡಬಾರದು ಅಂತಾ ಹೇಳಿದ್ದೇವೆ. ಕುಟುಂಬ ಸದಸ್ಯರಿಗೆ ಮತ್ತು ಪರಿಚಯಸ್ಥರಿಗೆ ಕೊಡಲು ಹೇಳಿತ್ತು. ಅದರೆ ಅಂಗಡಿ ಮಾಲೀಕರ ಬಲವಂತವಾಗಿ ಮರಾಟ ಮಾಡಿದ್ದರು. ಈಗ ಟಿಕೆಟ್ ಪಡೆದುಕೊಂಡು ಗ್ರಾಹಕರಿಗೆ ಹಣ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಜಾಗೃತಿ ಗೊಳಿಸುವ ಸಂಬಂಧ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಚಲನಚಿತ್ರವನ್ನು ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು ಹಾಗೂ ಕುಟುಂಬ ವರ್ಗದವರಿಗೆ ಹಾಗೂ ರಾಜ್ಯದ ಕಾರ್ಡುದಾರರಿಗೆ ಪ್ರದರ್ಶಿಸುವ ಸಲುವಾಗಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಚಲನಚಿತ್ರದ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಕೋರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಆಯುಕ್ತರು ಅದಾಗಲೇ ಆದೇಶಿಸಿತ್ತು. ಪಡಿತರ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಸಂಬಂಧ ಆಹಾರ ಇಲಾಖೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ