Headlines

Jolly Review: ಟ್ವಿಸ್ಟ್ ಜೊತೆಗೊಂದು ಪ್ರೇಮಕಥೆ ತೋರಿಸಿದ ಹೊಸ ಪ್ರತಿಭೆಗಳ ‘ಜಾಲಿ’ ಸಿನಿಮಾ – Kannada News | Jolly Kannada Movie review ft Tarush Krishna and Padmashree C Jain

  • Time – 118 Minutes
  • Released – July 31, 2026
  • Language – Kannada
  • Genre – Action, Drama, Romantic

Cast – ತಾರುಷ್, ತಾರುಷ್, ಪದ್ಮಶ್ರೀ ಸಿ. ಜೈನ್, ಶೋಭರಾಜ್, ಕೃಷ್ಣಪ್ಪ ವೇಣುಗೋಪಾಲ್, ರೇಖಾ ದಾಸ್, ಅಭಿ ಸಾಮ್ರಾಟ್ ಮುಂತಾದವರು.

Director – ತಾರುಷ್

ಚಿತ್ರರಂಗಕ್ಕೆ ಪ್ರತಿವಾರ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಒಂದಲ್ಲಾ ಒಂದು ವಿಭಾಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊಸ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸುತ್ತಾರೆ. ಈಗ ‘ಜಾಲಿ’ ಸಿನಿಮಾ ಮೂಲಕ ಹೊಸ ನಟ ತಾರುಷ್ (Tarush) ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ನಟನೆ ಮಾತ್ರವಲ್ಲದೇ ನಿರ್ದೇಶನದಲ್ಲೂ ಅವರು ರಂಗಪ್ರವೇಶ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜಾಲಿ’ ಸಿನಿಮಾ (Jolly Kannada Movie) ಜುಲೈ 31ರಂದು ರಿಲೀಸ್ ಆಗಿದೆ. ಸಿನಿಮಾದ ವಿಮರ್ಶೆ ಇಲ್ಲಿದೆ..

‘ಜಾಲಿ’ ಸಿನಿಮಾದಲ್ಲಿ ತಾರುಷ್ ಅವರು ಜಾಲಿ ಎಂಬ ಪಾತ್ರವನ್ನೇ ನಿಭಾಯಿಸಿದ್ದಾರೆ. ಹೀರೋ ಆಗಿ ಅವರು ಮೊದಲ ಚಿತ್ರದಲ್ಲೇ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆ್ಯಕ್ಷನ್, ಡ್ಯಾನ್ಸ್, ಕಾಮಿಡಿ ಹೀಗೆ ಹಲವು ರೀತಿಯಲ್ಲಿ ತಮ್ಮ ಪ್ರತಿಭೆ ತೋರಿಸಲು ಬಂದಿದ್ದಾರೆ. ನಾಯಕ ನಟನಾಗಲು ಅವರು ನಡೆಸಿದ ತಯಾರಿ ಏನೆಂಬುದು ತೆರೆಮೇಲೆ ಕಾಣುತ್ತದೆ. ಅವರಿಗೆ ಜೋಡಿಯಾಗಿ ಹೊಸ ನಟಿ ಪದ್ಮಶ್ರೀ ಜೈನ್ ಅವರು ಅಭಿನಯಿಸಿದ್ದಾರೆ.

ಜಾಲಿ ಸಿನಿಮಾದ ಕಥೆ ಹೇಗಿದೆ?

ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ‘ಜಾಲಿ’ ಸಿನಿಮಾ ಮಾಡಲಾಗಿದೆ. ಎರಡು ಹೃದಯಗಳ ಲವ್ ಸ್ಟೋರಿ, ತಂದೆ-ಮಗಳ ಬಾಂಧವ್ಯ, ಅಪ್ಪ-ಮಗನ ವೈಮನಸ್ಸು, ಸ್ನೇಹಿತರ ತರಲೆ, ತಮಾಷೆ, ಖಳರ ಕಿರಿಕ್ ಸೇರಿದಂತೆ ಹಲವು ಅಂಶಗಳು ಈ ಕಥೆಯಲ್ಲಿದೆ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು ತಾರುಷ್ ಅವರು ಈ ಸಿನಿಮಾ ಮಾಡಿದ್ದಾರೆ.

ತಾಯಿ ಇಲ್ಲದೇ ಒಂಟಿಯಾಗಿ ಬೆಳೆದ ಹೀರೋ ಜಾಲಿ (ತಾರುಷ್) ಒಂದು ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ ಜಾನು (ಪದ್ಮಶ್ರೀ ಸಿ. ಜೈನ್) ಮೇಲೆ ಪ್ರೀತಿ ಚಿಗುರುತ್ತದೆ. ಇವರಿಬ್ಬರ ಪ್ರೀತಿಗೆ ಪೋಷಕರು ಅಡ್ಡಿ ಆಗುತ್ತಾರೆ. ಆದರೆ ಅದನ್ನೂ ಮೀರಿ ತಮ್ಮ ಪ್ರೀತಿ ಪಡೆಯಲು ಜಾನು ಮತ್ತು ಜಾಲಿ ಪ್ರಯತ್ನಿಸುತ್ತಾರೆ. ಇನ್ನೇನು ಎಲ್ಲವೂ ಸರಿಹೋಯಿತು ಎಂಬಷ್ಟರಲ್ಲಿ ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.

ಸೀರಿಯಸ್ ದೃಶ್ಯಗಳ ನಡುವೆ ಕಾಮಿಡಿ:

ಮಧ್ಯಂತರದ ವೇಳೆ ಗಂಭೀರ ಎನಿಸಿಕೊಳ್ಳುವ ಕಥೆಯು ನಂತರ ಮತ್ತೆ ಕಾಮಿಡಿ ಟ್ರ್ಯಾಕ್​ಗೆ ಹೊರಳುತ್ತದೆ. ಕಾಲೇಜು ದಿನಗಳ ಫ್ಲ್ಯಾಶ್​ಬ್ಯಾಕ್ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಸಿನಿಮಾದ ಮೊದಲಾರ್ಧದಲ್ಲಿ ಬರುವ ಕಾಮಿಡಿ ದೃಶ್ಯಗಳು ಪೇಲವ ಎನಿಸಿಕೊಂಡಿವೆ. ಶೋಭರಾಜ್, ರೇಖಾದಾಸ್ ಅವರಂತಹ ಹಿರಿಯ ಕಲಾವಿದರಿಂದಾಗಿ ದೃಶ್ಯಗಳು ಕೊಂಚ ಸುಧಾರಿಸಿವೆ.

ಆ್ಯಕ್ಷನ್ ಮತ್ತು ಡ್ಯಾನ್ಸ್ ವಿಚಾರದಲ್ಲಿ ತಾರುಷ್ ಅವರು ಹಿಂದೆ ಬಿದ್ದಿಲ್ಲ. ಹೊಡಿಬಡಿ ದೃಶ್ಯಗಳನ್ನು ಬಯಸುವ ಪ್ರೇಕ್ಷಕರಿಗೆ ಅವರು ಮನರಂಜನೆ ನೀಡಿದ್ದಾರೆ. ಆದರೆ ಎಮೋಷನಲ್ ದೃಶ್ಯಗಳನ್ನು ನಿಭಾಯಿಸಲು ಅವರು ಇನ್ನಷ್ಟು ಮಾಗಬೇಕಿದೆ. ನಟಿ ಪದ್ಮಶ್ರೀ ಸಿ. ಜೈನ್ ಅವರು ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಕೃಷ್ಣಪ್ಪ ವೇಣುಗೋಪಾಲ್ ಅವರು ಗಂಭೀರವಾದ ಅಭಿನಯ ನೀಡಿದ್ದಾರೆ.

ಇದನ್ನೂ ಓದಿ: Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

‘ಜಾಲಿ’ ಸಿನಿಮಾದ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಎಲ್ಲ ಗೀತೆಯನ್ನು ಕಲರ್​ಫುಲ್ ಆಗಿ ಚಿತ್ರಿಸಲಾಗಿದೆ. ಒಟ್ಟಾರೆ ಕಥೆಯನ್ನು ಗಮನಿಸಿದರೆ ಇಲ್ಲಿ ಲಾಜಿಕ್ ಕಣ್ಮರೆ ಆಗಿರುವುದು ಸ್ಪಷ್ಟವಾಗುತ್ತದೆ. ಆ ಬಗ್ಗೆ ಗಮನ ಹರಿಸಿದ್ದರೆ ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿಸಬಹುದಿತ್ತು. ಈ ರೀತಿಯ ಕೆಲವು ಲೋಪಗಳ ನಡುವೆಯೂ ಹೊಸಬರ ಪ್ರಯತ್ನವಾದ ಈ ಚಿತ್ರವು ಟ್ವಿಸ್ಟ್ ಭರಿತ ಕಥೆಯಿಂದಾಗಿ ನೋಡಿಸಿಕೊಂಡು ಸಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *