ಮುಂಬೈ, ಏಪ್ರಿಲ್ 16: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯಲ್ಲಿ ಕೇಳಿಬಂದಿರುವ ಮತಾಂತರ ಪ್ರಯತ್ನ ಹಾಗೂ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಈಗ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ. ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೌಕರರಿಗೆ ವರ್ಕ್ ಫ್ರಮ್ ಹೋಮ್ (WFH) ಸೂಚಿಸಲಾಗಿದೆ. ನಾಸಿಕ್ ಪೊಲೀಸರು ತನಿಖೆ ವಿಸ್ತರಿಸುತ್ತಿದ್ದು, ಎನ್ಐಎ, ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಹಾಗೂ ರಾಜ್ಯ ಗುಪ್ತಚರ ಘಟಕಗಳ ಸಹಾಯ ಪಡೆಯುತ್ತಿದ್ದಾರೆ.
ಏನಿದು ಟಿಸಿಎಸ್ ಪ್ರಕರಣ?
ನಾಸಿಕ್‌ನ ಟಿಸಿಎಸ್ ಘಟಕದ ಹಿರಿಯ ಅಧಿಕಾರಿಯೊಬ್ಬರು ಉದ್ಯೋಗಿಗಳಿಗೆ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಮತ್ತು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಷಯವು ಸ್ಥಳೀಯವಾಗಿ ಉದ್ವಿಗ್ನತೆಗೆ ಕಾರಣವಾಗಿದ್ದು, ಕಂಪನಿಯ ಆಂತರಿಕ ಶಿಸ್ತು ಸಮಿತಿ ಹಾಗೂ ಬಾಹ್ಯ ಸಂಸ್ಥೆಗಳು ತನಿಖೆಗೆ ಇಳಿದಿವೆ.
ತನಿಖಾ ಸಂಸ್ಥೆಗಳ ಬಿರುಸಿನ ಕ್ರಮ
ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಟಿಸಿಎಸ್ ಆಡಳಿತ ಮಂಡಳಿ, ದೆಹಲಿಯಿಂದ ವಿಶೇಷ ತಂಡವೊಂದನ್ನು ನಾಸಿಕ್‌ಗೆ ಕಳುಹಿಸಿಕೊಟ್ಟಿದೆ. ಈ ತಂಡವು ಈಗಾಗಲೇ ಉದ್ಯೋಗಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್ಲೈನ್ನಲ್ಲಿ ತಕರಾರು
ಕಾರ್ಮಿಕ ಉಪ ಆಯುಕ್ತರ ಕಚೇರಿಯ ತಂಡವು ಇತ್ತೀಚೆಗೆ ಕಚೇರಿಯ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ ಕಚೇರಿಯಲ್ಲಿ ಉದ್ಯೋಗಿಗಳು ಇರಲಿಲ್ಲವಾದರೂ, ತಂಡವು ‘ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ’ಯ ಅಡಿಯಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಪ್ರಕರಣದ ಗಂಭೀರತೆ ಅರಿತು ರಾಷ್ಟ್ರೀಯ ಮಹಿಳಾ ಆಯೋಗದ (NCW) ತಂಡವು ಏಪ್ರಿಲ್ 18 ರಂದು ನಾಸಿಕ್‌ಗೆ ಭೇಟಿ ನೀಡಲಿದ್ದು, ಕಿರುಕುಳಕ್ಕೊಳಗಾದ ಮಹಿಳಾ ಉದ್ಯೋಗಿಗಳೊಂದಿಗೆ ನೇರ ವಿಚಾರಣೆ ನಡೆಸಲಿದೆ.
ಮನೆಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ
ಕಚೇರಿ ಆವರಣದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ನಡೆಯುತ್ತಿರುವ ತನಿಖೆಯ ದೃಷ್ಟಿಯಿಂದ, ಸುಮಾರು 150 ಉದ್ಯೋಗಿಗಳಿಗೆ ಸೋಮವಾರದಿಂದ ಮನೆಯಿಂದಲೇ ಕೆಲಸ ಮಾಡುವಂತೆ (Work From Home) ಸೂಚಿಸಲಾಗಿದೆ. ತನಿಖೆಗೆ ಯಾವುದೇ ಅಡ್ಡಿಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್‌ನ ಟಿಸಿಎಸ್ ಕಚೇರಿಗೆ ಬೀಗ
ಟಿಸಿಎಸ್ ಸ್ಪಷ್ಟನೆ
ಕಂಪನಿಯು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ನೈತಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ತಿಳಿಸಿದೆ. ಆಂತರಿಕ ವಿಚಾರಣೆ ಪ್ರಗತಿಯಲ್ಲಿದ್ದು, ದೋಷ ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ.
ಪ್ರಸ್ತುತ, ವಿವಿಧ ತನಿಖಾ ಸಂಸ್ಥೆಗಳು ಈ ಪ್ರಕರಣದ ಪ್ರತಿಯೊಂದು ಮಗ್ಗುಲನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿವೆ.
ಇತರ ಐಟಿ ಕಂಪನಿಗಳ ಮೇಲೂ ಕಣ್ಣು
ಟಿಸಿಎಸ್ನಲ್ಲಿ ಲೈಂಗಿಕ ಕಿರುಕುಳ ಮತಾಂತರ ಪಿತೂರಿ ಆರೋಪಗಳು ಕೇಳಿಬರುತ್ತಿರುವಂತೆಯೇ ಇತರ ಕಾರ್ಪೊರೇಟ್ ಸಂಸ್ಥೆಗಳತ್ತ ಎಲ್ಲರ ಚಿತ್ತ ನೆಡಲು ಶುರುವಾಗಿದೆ. ಲೆನ್ಸ್ಕಾರ್ಟ್ನಲ್ಲಿ ಉದ್ಯೋಗಿಗಳು ಹಿಜಾಬ್ ಹಾಕಬಹುದು, ಆದರೆ, ಸಿಂದೂರ ಇಡುವಂತಿಲ್ಲ ಎನ್ನುವ ನಿಯಮ ಇರುವುದನ್ನು ಕೆಲವರು ಎತ್ತಿ ತೋರಿಸಿದ್ದಾರೆ. ಇನ್ಫೋಸಿಸ್ನಲ್ಲಿ ಲೈಂಗಿಕ ಕಿರುಕುಳ ಘಟನೆ ನಡೆಯುತ್ತಿರುವುದನ್ನು ಯಾರೋ ಬೊಟ್ಟು ಮಾಡಿದ್ದಾರೆ. ಟೆಕ್ ಮಹೀಂದ್ರ ಕಂಪನಿಯಲ್ಲಿ ರಂಜಾನ್ ಮುಗಿಯುವವರೆಗೂ ಪಾದರಕ್ಷೆಮುಕ್ತ ವಲಯ ನಿರ್ಮಿಸಿದ ಘಟನೆಯನ್ನು ಮತ್ತೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ