ಟಿ20 ಕ್ರಿಕೆಟ್ ಅಂದರೆ ಹೊಡಿಬಡಿಯಾಟ… ಅದರಲ್ಲೂ ಕಡಿಮೆ ಮೊತ್ತದ ಟಾರ್ಗೆಟ್ ಸಿಕ್ಕರೆ ಬ್ಯಾಟರ್ಗಳು ಅಬ್ಬರಿಸುವುದು ವಾಡಿಕೆ. ಆದರೆ ದುಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಪಂದ್ಯದಲ್ಲಿ ಸ್ಲೋ ಇನಿಂಗ್ಸ್ ಆಡಿದ ಜೋರ್ಡನ್ ಕಾಕ್ಸ್ ಸುದ್ದಿಯಾಗಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶಾರ್ಜಾ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
135 ರನ್ಗಳ ಗುರಿ ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಶಯಾನ್ ಜಹಾಂಗೀರ್ ಉತ್ತಮ ಆರಂಭ ಒದಗಿಸಿದ್ದರು. 39 ಎಸೆತಗಳನ್ನು ಎದುರಿಸಿದ ಶಯಾನ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 51 ರನ್ ಬಾರಿಸಿದ್ದರು.
ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದರು. ಬರೋಬ್ಬರಿ 50 ಎಸೆತಗಳನ್ನು ಎದುರಿಸಿದ ಜೋರ್ಡನ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 61 ರನ್ ಕಲೆಹಾಕಿದರು.
ಕಾಕ್ಸ್ ಅವರ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 135 ರನ್ಗಳ ಗುರಿ ತಲುಪಲು ದುಬೈ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 19.1 ಓವರ್ಗಳನ್ನು ತೆಗೆದುಕೊಂಡಿತು. ಅಂದರೆ ಕೊನೆಯ ಓವರ್ನಲ್ಲಿ 6 ವಿಕೆಟ್ಗಳ ಜಯ ದಕ್ಕಿಸಿಕೊಂಡಿದ್ದರು.
ಅಂದಹಾಗೆ ಜೋರ್ಡನ್ ಕಾಕ್ಸ್ ಮುಂಬರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಮಿಜಿ ಹರಾಜಿನ ಮೂಲಕ ಕಾಕ್ಸ್ ಅವರನ್ನು ಆರ್ಸಿಬಿ 75 ಲಕ್ಷ ರೂ.ಗೆ ಖರೀದಿಸಿದೆ.
