ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಟೀಮ್ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಅವರ ಬದಲಿಗೆ ಇದೀಗ ಜಮ್ಮು-ಕಾಶ್ಮೀರದ ವೇಗಿ ಆಕಿಬ್ ನಬಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. (PC: BCCI)
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಎಡಗಾಲಿನ ಮಂಡಿ ಗಾಯಕ್ಕೆ ತುತ್ತಾಗಿದ್ದ ಜಸ್ಪ್ರೀತ್ ಬುಮ್ರಾ ಅವರು ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಿ, ಭಾರತ ತಂಡದಿಂದ ಹೊರಗಿಡಲಾಗಿದೆ. (PC: BCCI)
ಬುಮ್ರಾ ಬದಲಿಗೆ ರಣಜಿ ಟೂರ್ನಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದ ಆಕಿಬ್ ನಬಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಇವರ ದೇಶಿ ಕ್ರಿಕೆಟ್ ಸಾಧನೆಯನ್ನು ಗುರುತಿಸದ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಹಲವು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು. ಇದೀಗ ಬುಮ್ರಾ ಸರಣಿಯಿಂದ ಹೊರಗುಳಿಯುತ್ತಿದ್ದಂತೆ ಆಕಿಬ್ ನಬಿಗೆ ಅದೃಷ್ಟ ಒಲಿದಿದೆ. (PC: BCCI)
ಕಳೆದ ಎರಡು ರಣಜಿ ಟೂರ್ನಿಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಆಕಿಬ್ ನಬಿ 18 ಪಂದ್ಯಗಳ ಮೂಲಕ ಬರೋಬ್ಬರಿ 104 ವಿಕೆಟ್ ಕಬಳಿಸಿದ್ದರು. ಅದರಲ್ಲೂ 2025-26ರ ರಣಜಿ ಟೂರ್ನಿಯಲ್ಲಿ 60 ವಿಕೆಟ್ ಉರುಳಿಸಿ ಜಮ್ಮು-ಕಾಶ್ಮೀರ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪ್ರಚಂಡ ಪ್ರದರ್ಶನದ ಫಲವಾಗಿ ಇದೀಗ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. (PC: BCCI)
ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ. (PC: BCCI)
