ಭಾರತ ಹಾಗೂ ಝಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23, 2026 ರಿಂದ ಹರಾರೆಯಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿವಿಎಸ್ ಲಕ್ಷ್ಮಣ್. ಇಂಗ್ಲೆಂಡ್ ಪ್ರವಾಸದ ಸರಣಿ ಮುಗಿದ ಬೆನ್ನಲ್ಲೇ ಈ ಸರಣಿ ಆರಂಭವಾಗುತ್ತಿರುವುದರಿಂದ, ಬಿಸಿಸಿಐ ವಿಭಜಿತ-ಕೋಚಿಂಗ್ ಮಾದರಿಯನ್ನು ಅಳವಡಿಸಿಕೊಂಡಿದೆ.
ಇದರ ಅಡಿಯಲ್ಲಿ ನಿಯಮಿತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರು ಮತ್ತೊಮ್ಮೆ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಲಕ್ಷ್ಮಣ್ ಕೋಚಿಂಗ್ ಸಾಧನೆಗಳು:
ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದಾಗಲೆಲ್ಲಾ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ.
- ಐರ್ಲೆಂಡ್ ಸರಣಿ (2022): ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಜಯಿಸಿತ್ತು.
- ಝಿಂಬಾಬ್ವೆ ಸರಣಿ (2022): ಝಿಂಬಾಬ್ವೆ ವಿರುದ್ಧ 2022 ರಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ 3-0 ರಿಂದ ಕ್ಲೀನ್ ಸ್ವೀಪ್ ಮಾಡಿತ್ತು.
- ನ್ಯೂಝಿಲೆಂಡ್ ಸರಣಿ (2022): ನ್ಯೂಝಿಲೆಂಡ್ 2022 ರಲ್ಲಿ ಆಡಲಾದ ಟಿ20 ಸರಣಿಯನ್ನು ಭಾರತ 1-0 ರಿಂದ ಗೆದ್ದುಕೊಂಡಿತ್ತು.
- ಆಸ್ಟ್ರೇಲಿಯಾ ಸರಣಿ (2023): ಏಕದಿನ ವಿಶ್ವಕಪ್ ಮುಗಿದ ತಕ್ಷಣ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಲಕ್ಷ್ಮಣ್ ಮಾರ್ಗದರ್ಶನದ ಭಾರತ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿತ್ತು.
- ಏಷ್ಯನ್ ಗೇಮ್ಸ್ (2023): ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಲಕ್ಷ್ಮಣ್ ಕೋಚಿಂಗ್ ಅಡಿಯಲ್ಲಿ ಯುವ ಭಾರತ ತಂಡ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು.
- ಝಿಂಬಾಬ್ವೆ ಸರಣಿ (2024): ಶುಭ್ಮನ್ ಗಿಲ್ ನಾಯಕತ್ವದ ಯುವ ತಂಡವು 2024ರಲ್ಲಿ ಲಕ್ಷ್ಮಣ್ ಅವರ ಉಸ್ತುವಾರಿಯಲ್ಲೇ ಝಿಂಬಾಬ್ವೆ ವಿರುದ್ಧ 4-1 ರಿಂದ ಟಿ20 ಸರಣಿ ಗೆದ್ದಿತ್ತು.
ಇದೀಗ ಮತ್ತೊಮ್ಮೆ ವಿವಿಎಸ್ ಲಕ್ಷ್ಮಣ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲೂ ಭಾರತ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.
ಭಾರತ ಮತ್ತು ಝಿಂಬಾಬ್ವೆ ಸರಣಿ ವೇಳಾಪಟ್ಟಿ:
- ಮೊದಲ ಟಿ20 ಪಂದ್ಯ: ಜುಲೈ 23, 2026 (ಭಾರತೀಯ ಕಾಲಮಾನ ಸಂಜೆ 4:30)
- ಎರಡನೇ ಟಿ20 ಪಂದ್ಯ: ಜುಲೈ 25, 2026 (ಭಾರತೀಯ ಕಾಲಮಾನ ಸಂಜೆ 4:30)
- ಮೂರನೇ ಟಿ20 ಪಂದ್ಯ: ಜುಲೈ 26, 2026 (ಭಾರತೀಯ ಕಾಲಮಾನ ಸಂಜೆ 4:30)
ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್ನಲ್ಲಿ ಕಣಕ್ಕಿಳಿಯುವ 8 ತಂಡಗಳು ಹೀಗಿವೆ
ಝಿಂಬಾಬ್ವೆ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಮ್ಯಾಚ್ಗಳ ಟೆಸ್ಟ್ ಸರಣಿಯನ್ನು ಆಡಲಿದೆ.
