ಟೀಮ್ ಇಂಡಿಯಾದ ಬೆಸ್ಟ್ ಕೋಚ್ ಯಾರೆಂದು ತಿಳಿಸಿದ ಶಮಿ – Kannada News | Not Dravid or Gambhir! Shami Picks Shastri as Best Coach

ಭಾರತ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಹೆಡ್ ಕೋಚ್ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಾಹುಲ್ ದ್ರಾವಿಡ್ ಅಥವಾ ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಅವರ ಬದಲಿಗೆ, ರವಿಶಾಸ್ತ್ರಿ ಅವರನ್ನು ತಮ್ಮ ಸಾರ್ವಕಾಲಿಕ ನೆಚ್ಚಿನ ಕೋಚ್ ಎಂದು ಹೆಸರಿಸಿದ್ದಾರೆ.

ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್ ಅವರಲ್ಲಿ ಯಾರು ಅತ್ಯುತ್ತಮ ಕೋಚ್ ಎಂಬ ಆಯ್ಕೆಯನ್ನು ಶಮಿ ಅವರಿಗೆ ನೀಡಲಾಗಿತ್ತು. ಇವರಲ್ಲಿ ಶಮಿ ಅವರ ಆಯ್ಕೆ ರವಿಶಾಸ್ತ್ರಿ ಎಂಬುದು ವಿಶೇಷ.

ರವಿಶಾಸ್ತ್ರಿ ಅವರನ್ನೇ ಆಯ್ಕೆ ಮಾಡಲು ಕಾರಣಗಳೇನು?

ರವಿಶಾಸ್ತ್ರಿ ಅವರ ಕೋಚಿಂಗ್ ಶೈಲಿಯಲ್ಲಿದ್ದ ಪ್ರಮುಖ ಅಂಶವೆಂದರೆ ಆಟಗಾರರಿಗೆ ನೀಡುತ್ತಿದ್ದ ಸ್ವಾತಂತ್ರ್ಯ. ಮೈದಾನದಲ್ಲಿ ಆಟಗಾರರು ಯಾವುದೇ ಒತ್ತಡವಿಲ್ಲದೆ ತಮ್ಮ ನೈಸರ್ಗಿಕ ಆಟವನ್ನು ಪ್ರದರ್ಶಿಸಲು ಶಾಸ್ತ್ರಿ ಮುಕ್ತ ಅವಕಾಶ ನೀಡುತ್ತಿದ್ದರು ಎಂದು ಶಮಿ ಶ್ಲಾಘಿಸಿದ್ದಾರೆ.

ಹಾಗೆಯೇ ರವಿಶಾಸ್ತ್ರಿ ಅವರಲ್ಲಿದ್ದ ಆಕ್ರಮಣಕಾರಿ ಗುಣ ಮತ್ತು ಉತ್ಸಾಹವು ಇಡೀ ತಂಡಕ್ಕೆ ಹರಡುತ್ತಿತ್ತು. ಇದು ತಂಡದಲ್ಲಿ ಯಾವುದೇ ತಂಡದ ವಿರುದ್ಧವೂ ಹೆದರದೆ ಹೋರಾಡುವ ಮನೋಭಾವವನ್ನು ಬೆಳೆಸಿತು. ವಿಶೇಷವಾಗಿ ವಿದೇಶಿ ನೆಲದಲ್ಲಿ ಭಾರತ ಐತಿಹಾಸಿಕ ಜಯ ದಾಖಲಿಸಲು ಈ ಧೈರ್ಯವೇ ಕಾರಣವಾಗಿತ್ತು ಎಂದು ಶಮಿ ನೆನೆದಿದ್ದಾರೆ.

ವೇಗಿಗಳಿಗೆ ಬೆಂಬಲ:

ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರ ಅವಧಿಯಲ್ಲಿ ಭಾರತೀಯ ವೇಗದ ಬೌಲಿಂಗ್ ಪಡೆ ಜಾಗತಿಕ ಮಟ್ಟದಲ್ಲಿ ಅಧಿಪತ್ಯ ಸ್ಥಾಪಿಸಿತ್ತು. ಶಮಿ ಅವರ ವೃತ್ತಿಜೀವನದ ಅತ್ಯುತ್ತಮ ಟೆಸ್ಟ್ ಪ್ರದರ್ಶನಗಳು ಹೊರಬಂದಿದ್ದೂ ಇದೇ ಅವಧಿಯಲ್ಲಾಗಿದೆ. ಇದೇ ಕಾರಣದಿಂದಾಗಿ ಮೊಹಮ್ಮದ್ ಶಮಿ, ರವಿಶಾಸ್ತ್ರಿ ಅವರನ್ನು ಬೆಸ್ಟ್ ಕೋಚ್ ಎಂದಿದ್ದಾರೆ.

ಇತರ ಕೋಚ್‌ಗಳ ಬಗ್ಗೆ ಶಮಿ ಅಭಿಪ್ರಾಯ:

ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿಯೂ ತಾವು ಸಾಕಷ್ಟು ಸಮಯ ಕಳೆದಿದ್ದು, ಅವರಿಂದ ಕ್ರಿಕೆಟ್‌ನ ಹಲವು ಸೂಕ್ಷ್ಮ ವಿಷಯಗಳನ್ನು ಕಲಿತಿರುವುದಾಗಿ ಶಮಿ ಗೌರವಪೂರ್ವಕವಾಗಿ ಹೇಳಿದ್ದಾರೆ.

ಆದರೆ  ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ  ಹೆಚ್ಚಿನ ಪಂದ್ಯಗಳನ್ನು ಆಡದೇ ಇರುವ ಕಾರಣ, ಈ ಹಂತದಲ್ಲಿ ಅವರನ್ನು ಇತರರಿಗೆ ಹೋಲಿಸುವುದು ಕಷ್ಟ ಎಂದು ಶಮಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ ರೆಡಿ!

ಕಂಬ್ಯಾಕ್ ನಿರೀಕ್ಷೆಯಲ್ಲಿ ಶಮಿ:

ಸದ್ಯ ಆಯ್ಕೆ ಸಮಿತಿಯ ನಿರ್ಧಾರಗಳಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿರುವ 35 ವರ್ಷದ ಮೊಹಮ್ಮದ್ ಶಮಿ, ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್‌ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೆ ಟೀಮ್ ಇಂಡಿಯಾ ಜೆರ್ಸಿ ಧರಿಸಲು ಕಠಿಣ ಶ್ರಮಪಡುತ್ತಿರುವುದಾಗಿ ಶಮಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *