ಟಿ20 ವಿಶ್ವಕಪ್ 2026ರ ಬಳಿಕ ಟೀಮ್ ಇಂಡಿಯಾ ಮತ್ತೆ ಚುಟುಕು ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿ ಭಾರತ ತಂಡ ಕಣಕ್ಕಿಳಿಯಲಿರುವುದು ಹೊಸ ನಾಯಕ ಹಾಗೂ ಯುವ ಪಡೆಯೊಂದಿಗೆ ಎಂಬುದು ವಿಶೇಷ. ಇನ್ನು ಟೀಮ್ ಇಂಡಿಯಾದ ಎದುರಾಳಿ ಐರ್ಲೆಂಡ್.
ಜೂನ್ 26 ರಿಂದ ಬೆಲ್‌ಫಾಸ್ಟ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗಾಗಿ ಆಯ್ಕೆಯಾಗಿರುವ 16 ಸದಸ್ಯರ ಭಾರತ ತಂಡದಲ್ಲಿ, ಬರೋಬ್ಬರಿ ಆರು ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐರ್ಲೆಂಡ್‌ನಲ್ಲಿ ಪಂದ್ಯವಾಡಲು ಸಜ್ಜಾಗಿದ್ದಾರೆ. ಅಂದರೆ ಇದಕ್ಕೂ ಮುನ್ನ ಈ ಆರು ಆಟಗಾರರು ಐರ್ಲೆಂಡ್‌ನಲ್ಲಿ ಒಂದೇ ಪಂದು ಪಂದ್ಯವಾಡಿಲ್ಲ. ಅವರೆಂದರೆ…
ಶ್ರೇಯಸ್ ಅಯ್ಯರ್ (ನಾಯಕ): ಭಾರತ ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಅಪಾರ ಅಂತಾರಾಷ್ಟ್ರೀಯ ಅನುಭವವಿದೆ. ಆದರೆ, ಅವರು ಇದುವರೆಗೆ ಐರ್ಲೆಂಡ್‌ನಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ. ಇದೀಗ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಲು ಸಜ್ಜಾಗಿ ನಿಂತಿದ್ದಾರೆ.
ವೈಭವ್ ಸೂರ್ಯವಂಶಿ: ಐಪಿಎಲ್ 2026ರಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇಡೀ ವಿಶ್ವದ ಗಮನ ಸೆಳೆದಿದ್ದ 15 ವರ್ಷ ಬ್ಯಾಟಿಂಗ್ ವಿಸ್ಮಯ ವೈಭವ್ ಸೂರ್ಯವಂಶಿ ಕೂಡ ಇದೇ ಮೊದಲ ಬಾರಿಗೆ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.
ಅಭಿಷೇಕ್ ಶರ್ಮಾ: ಭಾರತದ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರಿಗೂ ಇದು ಮೊದಲ ಐರ್ಲೆಂಡ್ ಪ್ರವಾಸವಾಗಿದೆ.
ಹರ್ಷಿತ್ ರಾಣಾ: ಭಾರತ ತಂಡದ ಉದಯೋನ್ಮುಖ ವೇಗದ ಬೌಲರ್ ಹರ್ಷಿತ್ ರಾಣಾ ಐರಿಷ್ ಪರಿಸ್ಥಿತಿಯಲ್ಲಿ ಮೊದಲ ಬಾರಿಗೆ ತಮ್ಮ ಬೌಲಿಂಗ್ ಪ್ರದರ್ಶಿಸಲು ಕಾಯುತ್ತಿದ್ದಾರೆ.
ಪ್ರಿನ್ಸ್ ಯಾದವ್: ದೇಶಿ ಕ್ರಿಕೆಟ್‌ನಲ್ಲಿ ಮಿಂಚಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಅನ್‌ಕ್ಯಾಪ್ಡ್ ವೇಗಿ ಪ್ರಿನ್ಸ್ ಯಾದವ್ ಅವರಿಗೂ ಇದು ಮೊದಲ ಐರ್ಲೆಂಡ್ ಸರಣಿ.
ಸೂರ್ಯಾಂಶ್ ಶೆಡ್ಗೆ: ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಬದಲಿಯಾಗಿ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಆಲ್ ರೌಂಡರ್ ಸೂರ್ಯಾಂಶ್ ಶೆಡ್ಗೆ ಅವರಿಗೂ ಇದು ಚೊಚ್ಚಲ ಐರ್ಲೆಂಡ್ ಪ್ರವಾಸ.
ಇನ್ನುಳಿದಂತೆ ಪ್ರಸ್ತುತ ತಂಡದಲ್ಲಿರುವ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಮತ್ತು ಪ್ರಸಿದ್ಧ್ ಕೃಷ್ಣ ಈಗಾಗಲೇ ಐರ್ಲೆಂಡ್ ವಿರುದ್ಧ ಆಡಿದ್ದಾರೆ.
ಇದನ್ನೂ ಓದಿ: IPL 2027: ಬಿಗ್ ಟ್ರೇಡ್… ಇಬ್ಬರು ಆಟಗಾರರ ತಂಡಗಳು ಅದಲು-ಬದಲು
Published On – 2:18 pm, Wed, 24 June 26
