ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಈ ತೀವ್ರ ಪೈಪೋಟಿಯ ನಡುವೆಯೂ ಟೀಮ್ ಇಂಡಿಯಾ ಫೈನಲ್ ರೇಸ್‌ನಲ್ಲಿ ಮುನ್ನಡೆಯುತ್ತಿದೆ. ಆದರೆ, ಫೈನಲ್ ಹಾದಿಯನ್ನು ಮತ್ತಷ್ಟು ಸುಲಭಗೊಳಿಸಿಕೊಳ್ಳಬೇಕಿದ್ದರೆ ಭಾರತ ತಂಡ ಶ್ರೀಲಂಕಾ ವಿರುದ್ಧದ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಇಲ್ಲಿ ಸೋತರೆ ಅಥವಾ ಪಂದ್ಯ ಡ್ರಾಗೊಂಡರೆ ಭಾರತದ ಫೈನಲ್ ಕನಸಿಗೆ ದೊಡ್ಡ ಹೊಡೆತ ಬೀಳುವುದರಲ್ಲಿ ಸಂಶಯವಿಲ್ಲ.
ಏಕೆಂದರೆ, ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ 5ನೇ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಡ್ರಾ ಆದಲ್ಲಿ ಭಾರತದ ಅಂಕಗಳಲ್ಲಿ ಯಾವುದೇ ದೊಡ್ಡ ಸಕಾರಾತ್ಮಕ ಬದಲಾವಣೆ ಕಂಡುಬರುವುದಿಲ್ಲ. WTC ನಿಯಮಗಳ ಪ್ರಕಾರ ಪಂದ್ಯ ಡ್ರಾಗೊಂಡರೆ ಕೇವಲ 4 ಅಂಕಗಳು ಮಾತ್ರ ಸಿಗುತ್ತವೆ. ಅದೇ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾಗೆ ಪೂರ್ಣ 12 ಅಂಕಗಳು ಲಭ್ಯವಾಗಲಿವೆ. ಇದರೊಂದಿಗೆ ತಂಡದ ಪಾಯಿಂಟ್ ಪರ್ಸೆಂಟೇಜ್ (PCT) ಕೂಡ ಗಣನೀಯವಾಗಿ ಹೆಚ್ಚಾಗಲಿದ್ದು, ಫೈನಲ್ ಹಾದಿ ಸುಲಭವಾಗಲಿದೆ.
ಟೀಮ್ ಇಂಡಿಯಾಗೆ ಮಳೆ ಭೀತಿ:
ಈ ಪಂದ್ಯದ ಅಂತಿಮ ಫಲಿತಾಂಶ ನಿರ್ಧಾರವಾಗಲು ಈಗ 5ನೇ ಹಾಗೂ ಕೊನೆಯ ದಿನದಾಟ ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಐದನೇ ದಿನದ ಆಟ ಮಳೆಗೆ ಆಹುತಿಯಾದರೆ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಲಿದೆ. ಆದರೆ, WTC ಫೈನಲ್ ರೇಸ್‌ನಲ್ಲಿರುವ ಟೀಮ್ ಇಂಡಿಯಾ ಪಾಲಿಗೆ ಈ ಪಂದ್ಯ ಯಾವುದೇ ಕಾರಣಕ್ಕೂ ಡ್ರಾ ಆಗಲೇಬಾರದು.
ಏಕೆಂದರೆ ಭಾರತ ತಂಡ ಪೂರ್ಣ 12 ಅಂಕಗಳ ಮೇಲೆ ಕಣ್ಣಿಟ್ಟಿದೆ. ಅತ್ತ ಆರಂಭಿಕ ಕುಸಿತ ಕಂಡಿರುವ ಶ್ರೀಲಂಕಾ ತಂಡಕ್ಕೆ ಇನ್ನು ಗೆಲ್ಲಲು ಸಾಧ್ಯವಾಗದೇ ಇದ್ದರೆ, ಪಂದ್ಯವನ್ನು ಹೇಗಾದರೂ ಮಾಡಿ ಡ್ರಾನತ್ತ ಕೊಂಡೊಯ್ಯಲು ಸರ್ವಪ್ರಯತ್ನ ನಡೆಸುವುದರಲ್ಲಿ ಅನುಮಾನವಿಲ್ಲ. ಅದಕ್ಕೂ ಮುನ್ನ ಟೀಮ್ ಇಂಡಿಯಾ 6 ವಿಕೆಟ್ ಕಬಳಿಸಿದರೆ ಪಂದ್ಯ ಗೆಲ್ಲಬಹುದು.
WTC ಪಾಯಿಂಟ್ಸ್ ಟೇಬಲ್:
WTC ಸರಣಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಸದ್ಯ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಪ್ರಸ್ತುತ ಶೇಕಡಾ 48.15 ರೇಟಿಂಗ್ (PCT) ನೊಂದಿಗೆ ಐದನೇ ಸ್ಥಾನದಲ್ಲಿದೆ. ನಿಯಮಗಳ ಪ್ರಕಾರ ಅಗ್ರ ಎರಡು ತಂಡಗಳು ಮಾತ್ರ ಫೈನಲ್ ತಲುಪಲಿವೆ. ಒಂದು ವೇಳೆ ಈ ಪಂದ್ಯ ಡ್ರಾಗೊಂಡರೆ ಭಾರತದ ರೇಟಿಂಗ್ ಮತ್ತಷ್ಟು ಕುಸಿದು ಶೇಕಡಾ 46.66 ಕ್ಕೆ ತಲುಪಲಿದೆ. ಇದು ಭಾರತವನ್ನು ಫೈನಲ್ ರೇಸ್‌ನಿಂದ ಬಹುತೇಕ ದೂರ ತಳ್ಳಲಿದೆ.
ಇತರೆ ತಂಡಗಳಿಂದ ಪೈಪೋಟಿ:
WTC ಸರಣಿಯ ಪಾಯಿಂಟ್ಸ್ ಟೇಬಲ್ನಲ್ಲಿ ಸದ್ಯ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಅಗ್ರ ಸ್ಥಾನಗಳನ್ನು ಕಾಯ್ದುಕೊಂಡಿವೆ. ಇಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾವನ್ನು ಮಣಿಸಿದ ಬಾಂಗ್ಲಾದೇಶ್ ತಂಡವು ನಾಲ್ಕನೇ ಸ್ಥಾನಕ್ಕೇರಿ ಭಾರತಕ್ಕೆ ನೇರ ಸವಾಲು ಒಡ್ಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಡ್ರಾ ಮಾಡಿಕೊಂಡು ಅಂಕಗಳನ್ನು ಹಂಚಿಕೊಂಡರೆ, ಎದುರಾಳಿ ತಂಡಗಳಿಗೆ ಮುನ್ನಡೆಯಲು ನಾವೇ ರತ್ನಗಂಬಳಿ ಹಾಸಿಕೊಟ್ಟಂತಾಗುತ್ತದೆ.
ಮುಂಬರುವ ಕಠಿಣ ಸರಣಿಗಳು:
ಶ್ರೀಲಂಕಾ ಸರಣಿಯ ನಂತರ ಭಾರತ ಎದುರಿಸಬೇಕಿರುವ ಮುಂದಿನ ಹಾದಿ ಅತ್ಯಂತ ಕಠಿಣವಾಗಿದೆ. ಭಾರತ ತಂಡವು ಮುಂದಿನ ದಿನಗಳಲ್ಲಿ ನ್ಯೂಝಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣವಾದ ಬಾರ್ಡರ್-ಗವಾಸ್ಕರ್ ಟ್ರೋಫಿಯ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಎದುರಿಸಬೇಕಿದೆ.
ವಿದೇಶಿ ಮಣ್ಣಿನಲ್ಲಿ ನಡೆಯಲಿರುವ ಈ ಕಠಿಣ ಸವಾಲುಗಳಿಗೂ ಮುನ್ನ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪೂರ್ಣ 12 ಅಂಕಗಳನ್ನು ಪಡೆಯುವುದು ಅನಿವಾರ್ಯ. ಏಕೆಂದರೆ ಇಲ್ಲಿ ಅಂಕ ಕಳೆದುಕೊಂಡರೆ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನೆಲದಲ್ಲಿ ಪ್ರತಿ ಪಂದ್ಯವನ್ನೂ ಗೆಲ್ಲಲೇಬೇಕಾದ ವಿಪರೀತ ಒತ್ತಡಕ್ಕೆ ಭಾರತ ಸಿಲುಕಲಿದೆ.
ಅಂದರೆ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡರೆ, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಒಟ್ಟು 7 ಪಂದ್ಯಗಳ ಪೈಕಿ 5 ರಲ್ಲಿ ಜಯ ಸಾಧಿಸಿದರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪಲು ಉತ್ತಮ ಅವಕಾಶವಿರುತ್ತದೆ. ಈ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ, ಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು ಭಾರತ ತಂಡಕ್ಕೆ ಲಂಕಾ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಅತ್ಯಂತ ಅನಿವಾರ್ಯವಾಗಿದೆ.
ಇದನ್ನೂ ಓದಿ: ಪಂತ್ ಪವರ್: ನೂರು ಸಿಕ್ಸರ್ಗಳೊಂದಿಗೆ ಮೂರು ವಿಶ್ವ ದಾಖಲೆ ಧೂಳೀಪಟ
ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀಲಂಕಾ ವಿರುದ್ಧದ ಈ ಟೆಸ್ಟ್ ಸರಣಿಯು ಕೇವಲ ಪಂದ್ಯಗಳ ಗೆಲುವಷ್ಟೇ ಅಲ್ಲ, ಭಾರತ ತಂಡದ WTC ಫೈನಲ್ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಸರಣಿಯಾಗಿದೆ. ಇದೇ ಕಾರಣಕ್ಕಾಗಿ, ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲನ್ನು ಮಾತ್ರವಲ್ಲ, ಪಂದ್ಯ ಡ್ರಾಗೊಳ್ಳುವುದನ್ನೂ ಸಹ ಬಯಸುತ್ತಿಲ್ಲ. ಬದಲಿಗೆ, ಪ್ರತಿಯೊಂದು ಪಂದ್ಯದಲ್ಲೂ ಸ್ಪಷ್ಟ ಗೆಲುವನ್ನೇ ಗುರಿಯಾಗಿಸಿಕೊಂಡು ಕಣಕ್ಕಿಳಿಯುತ್ತಿದೆ.
