ಟಿ20 ವಿಶ್ವಕಪ್ ಚಾಂಪಿಯನ್ನರಿಗೆ ಹೀನಾಯ ಸೋಲುಣಿಸುವಲ್ಲಿ ಕೊನೆಗೂ ಐರ್ಲೆಂಡ್ ತಂಡ ಯಶಸ್ವಿಯಾಗಿದೆ. ಐರ್ಲೆಂಡ್ನ ಬೆಲ್ಫಾಸ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿದ್ದರು.
183 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾವನ್ನು 18.5 ಓವರ್ಗಳಲ್ಲಿ 148 ರನ್ಗಳಿಗೆ ಆಲೌಟ್ ಮಾಡುವಲ್ಲಿ ಐರ್ಲೆಂಡ್ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಐರ್ಲೆಂಡ್ ತಂಡ 34 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಸೋಲಿಗೆ ಇಬ್ಬರು ಭಾರತೀಯರು ಕಾರಣ!
ಈ ಪಂದ್ಯದ ರೋಚಕ ತಿರುವಿಗೆ ಕಾರಣವಾಗಿದ್ದು ಇಬ್ಬರು ಭಾರತೀಯರು. ಒಬ್ಬರು ಭಾರತದ ಪರವಾಗಿ ರನ್ ಬಿಟ್ಟುಕೊಟ್ಟು ವಿಲನ್ ಆದರೆ, ಮತ್ತೊಬ್ಬರು ಐರ್ಲೆಂಡ್ ಪರವಾಗಿ ಅತ್ಯುತ್ತಮ ಬೌಲೀಂಗ್ ದಾಳಿ ನಡೆಸಿದ ಹೀರೋ ಎನಿಸಿಕೊಂಡರು.
- ಪ್ರಸಿದ್ಧ್ ಕೃಷ್ಣ: ಈ ಪಂದ್ಯದಲ್ಲಿ ಐರ್ಲೆಂಡ್ ತಂಡವು ಬೃಹತ್ ಮೊತ್ತ ಪೇರಿಸಲು ಕಾರಣವಾಗಿದ್ದು ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ. ಸುರ್ದೀರ್ಘಾವಧಿಯ ಬಳಿಕ ಟಿ20 ತಂಡಕ್ಕೆ ಮರಳಿದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ 4 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 57 ರನ್ಗಳು.
- 27 ರನ್ಗಳ ದುಬಾರಿ ಓವರ್: ಪಂದ್ಯದ 17ನೇ ಓವರ್ ಎಸೆದ ಪ್ರಸಿದ್ಧ್ ಕೃಷ್ಣ ಅವರ ಓವರ್ನಲ್ಲಿ ಐರ್ಲೆಂಡ್ನ ಗರೆಥ್ ಡೆಲಾನಿ ಮತ್ತು ಜಾರ್ಜ್ ಡಾಕ್ರೆಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಓವರ್ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸೇರಿದಂತೆ ಬರೋಬ್ಬರಿ 27 ರನ್ ಚಚ್ಚಿದ್ದರು .
ಇದರ ಪರಿಣಾಮವಾಗಿ 150ರ ಅಸುಪಾಸಿನಲ್ಲಿ ಕೊನೆಗೊಳ್ಳಬೇಕಿದ್ದ ಐರ್ಲೆಂಡ್ ತಂಡ ಸ್ಕೋರ್ 180 ರನ್ಗಳನ್ನು ದಾಟಿತು. ಅಲ್ಲದೆ 20 ಓವರ್ಗಳಲ್ಲಿ 182/9 ರನ್ಗಳ ಬೃಹತ್ ಮೊತ್ತ ಪೇರಿಸಿತು.
- ಜೈ ಮುಂದ್ರ: 183 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಅತ್ಯಂತ ದೊಡ್ಡ ಆಘಾತ ನೀಡಿದ್ದು ಐರ್ಲೆಂಡ್ ತಂಡದ ಪರವಾಗಿ ಚೊಚ್ಚಲ ಪಂದ್ಯವಾಡಿದ 29 ವರ್ಷದ ವೇಗಿ ಜೈ ಮುಂದ್ರ. ಮೂಲತಃ ರಾಜಸ್ಥಾನದ ಟೋಂಕ್ ಜಿಲ್ಲೆಯವರಾದ ಜೈ ಮುಂದ್ರ, 2021 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಐರ್ಲೆಂಡ್ಗೆ ತೆರಳಿದ್ದರು. ಅಲ್ಲಿನ ದೇಶಿ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡಿ ಇದೀಗ ಐರ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
- ಕರಾರುವಾಕ್ ದಾಳಿ: ಭಾರತ ವಿರುದ್ಧ ಜೈ ಮುಂದ್ರ ಮೊದಲ ಎಸೆತದಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಸೆದ ಮೊದಲನೇ ಎಸೆತದಲ್ಲೇ ಸಂಜು ಸ್ಯಾಮ್ಸನ್ (5) ಅವರ ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು. ಅಲ್ಲದೆ 4 ಓವರ್ಗಳಲ್ಲಿ ಕೇವಲ 26 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಈ ಮೂಲಕ ಟೀಮ್ ಇಂಡಿಯಾ ರನ್ ವೇಗವನ್ನು ನಿಯಂತ್ರಿಸುವಲ್ಲಿ ಜೈ ಮುಂದ್ರ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: ಟೀಮ್ ಇಂಡಿಯಾಗೆ 23 ವರ್ಷದ ಯುವ ಆಲ್ರೌಂಡರ್ ಎಂಟ್ರಿ..!
ಅಂತಿಮವಾಗಿ ಭಾರತ ತಂಡ 18.5 ಓವರ್ಗಳಲ್ಲಿ 148 ರನ್ಗಳಿಗೆ ಆಲೌಟ್ ಆಗಿ 34 ರನ್ಗಳಿಂದ ಸೋಲೊಪ್ಪಿಕೊಂಡಿತು. ಅಂದರೆ ಒಂದೆಡೆ ಭಾರತೀಯ ವೇಗಿ ದುಬಾರಿಯಾದರೆ, ಮತ್ತೊಂದೆಡೆ ಭಾರತೀಯ ಮೂಲದ ವೇಗಿ ಮಿಂಚಿನ ದಾಳಿ ಸಂಘಟಿಸಿದರು. ಈ ಮೂಲಕ ಒಬ್ಬರು ಭಾರತದ ಸೋಲಿಗೆ ಕಾರಣವಾದರೆ, ಮತ್ತೊಬ್ಬರು ಐರ್ಲೆಂಡ್ ಗೆಲುವಿಗೆ ಕಾರಣಕರ್ತರಾದರು.
Published On – 7:52 am, Sat, 27 June 26