ಟೊಮೆಟೊ, ದಾಳಿಂಬೆ ಬೆನ್ನಲ್ಲೇ ದ್ರಾಕ್ಷಿ ಮೇಲೆ ಕಳ್ಳರ ಕಣ್ಣು: ರಾತ್ರೋರಾತ್ರಿ ಕೈಚಳಕ ತೋರಿಸಿದ ಖದೀಮರು! – Kannada News | Grape Theft: Red Globe Grapes Stolen Amid Price Surge

ಚಿಕ್ಕಬಳ್ಳಾಪುರ, ಜುಲೈ 15: ಚಿನ್ನ, ಬೆಳ್ಳಿ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ. ಟೊಮೆಟೊ, ದಾಳಿಂಬೆ ಬಳಿಕ ದ್ರಾಕ್ಷಿ (grape theft) ತೋಟಕ್ಕೆ ನುಗ್ಗಿರುವ ಕಳ್ಳರು ರಾತ್ರೋರಾತ್ರಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದಿರುವಂತಹ ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರಿಂದ ಆತಂಕಗೊಂಡಿರುವ ರೈತರು, ಕಳ್ಳರ ಪತ್ತೆಗೆ ಪೊಲೀಸರ ಮೊರೆ ಹೋಗಿದ್ದಾರೆ.

ನಡೆದಿದ್ದೇನು?

ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದ ಬಸವರಾಜ್ ಎಂಬುವವರಿಗೆ ಸೇರಿದ ತೋಟದಲ್ಲಿ ನಿನ್ನೆ ಕಳ್ಳತನ ನಡೆದಿದೆ. ಬಸವರಾಜ್ ಅವರು ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ತಳಿಯ ದ್ರಾಕ್ಷಿಯನ್ನು ಬೆಳೆದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ರೆಡ್ ಗ್ಲೋಬ್ ದ್ರಾಕ್ಷಿಗೆ ಬರೋಬ್ಬರಿ 150 ರೂ ಬಂಪರ್ ಬೆಲೆ ಹಾಗೂ ಭಾರೀ ಬೇಡಿಕೆ ಇದೆ. ದ್ರಾಕ್ಷಿಯ ಒಂದೊಂದು ಗೊಂಚಲು ಒಂದೂವರೆಯಿಂದ ಎರಡೂವರೆ ಕೆಜಿಯಷ್ಟು ತೂಕ ಬರುವಂತೆ ನಳನಳಿಸುತ್ತಿದ್ದವು. ಈ ದ್ರಾಕ್ಷಿಯನ್ನು ಖರೀದಿಸಲು ವರ್ತಕರು ರೈತರು ಕೇಳಿದಷ್ಟು ಬೆಲೆ ನೀಡಿ ತೋಟದಲ್ಲೇ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ನಿನ್ನೆ ರಾತ್ರಿ ಬಸವರಾಜ್ ಅವರ ತೋಟಕ್ಕೆ ನುಗ್ಗಿದ ಕಳ್ಳರು ರಾತ್ರೋರಾತ್ರಿ ಸುಮಾರು ಮೂರು ಟನ್ ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕಳ್ಳರ ವಿರುದ್ಧ ಕಠಿಣ ಕ್ರಮಕೈ ಒತ್ತಾಯ

ಈ ಬಾರಿ ದ್ರಾಕ್ಷಿಗೆ ಎಲ್ಲಿಲ್ಲದ ಬೆಲೆ ಬಂದಿದೆ. ಈ ಹಿಂದೆ ಟೊಮೆಟೊ ಹಾಗೂ ದಾಳಿಂಬೆ ಬೆಲೆ ಏರಿಕೆಯಾದ ಸಂದರ್ಭದಲ್ಲೂ ಕಳ್ಳರು ತೋಟಗಳಿಗೆ ನುಗ್ಗಿ ತಮ್ಮ ಕೈಚಳಕ ತೋರಿಸಿದ್ದರು. ಆದರೆ ದ್ರಾಕ್ಷಿ ತೋಟದ ಮೇಲೆ ದಾಳಿ ನಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗುತ್ತಿದೆ. ಇದರಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದು, ತೋಟಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸುಮಾರು 3 ಲಕ್ಷ ರೂ ಮೌಲ್ಯದ ದ್ರಾಕ್ಷಿ ಕಳುವು

ಕಳುವಾದ ದ್ರಾಕ್ಷಿಯ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ತೋಟದ ಹಿಂಭಾಗದಲ್ಲಿರುವ ಕೆರೆಯ ಬಳಿ, ವಾಹನ ನಿಲ್ಲಿಸಿ ಅಲ್ಲಿಂದಲೇ ದ್ರಾಕ್ಷಿಯನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿ ಬೆಳೆ ಕಳುವಾಗಿರುವುದು ಜಿಲ್ಲೆಯ ರೈತರನ್ನು ಬೆಚ್ಚಿಬೀಳಿಸಿದೆ. ತೋಟಗಾರಿಕಾ ಬೆಳೆಗಳ ಮೇಲೆ ನಿರಂತರವಾಗಿ ಕಳ್ಳರ ಕಣ್ಣು ಬೀಳುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಶೀಘ್ರವಾಗಿ ಕಳ್ಳರನ್ನು ಬಂಧಿಸಿ ತಮಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸ್ಥಳೀಯ ರೈತರಾದ ಮಂಜುನಾಥ್ ಸೇರಿದಂತೆ ಹಲವರು ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *