ಹೆಚ್.ಡಿ.ಕುಮಾರಸ್ವಾಮಿImage Credit source: tv9 kannada
ಬೆಂಗಳೂರು, ಆಗಸ್ಟ್ 18: ‘ಬಿಡದಿ ಟೌನ್‌ಶಿಪ್ ಮತ್ತು ನೈಸ್ ಯೋಜನೆಗಳ ಪಿತಾಮಹರು ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ನಾನು ನೇರ ಸವಾಲು ಹಾಕುತ್ತಿದ್ದೇನೆ. ಫ್ರೀಡಂ ಪಾರ್ಕ್‌ನಲ್ಲೇ ಒಂದು ವೇದಿಕೆ ಸಿದ್ಧಪಡಿಸಿ, ಬಹಿರಂಗ ಚರ್ಚೆಗೆ ನಿಮ್ಮ ಹಾಲಿ-ಮಾಜಿ ಶಾಸಕರೆಲ್ಲ ಒಟ್ಟಾಗಿ ಬನ್ನಿ, ನಿಮ್ಮೆಲ್ಲರನ್ನೂ ನಾನು ಏಕಾಂಗಿಯಾಗಿಯೇ ಎದುರಿಸಲು ಸಿದ್ಧನಿದ್ದೇನೆ,’ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy)
ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ‘ನೈಸ್ ಅಕ್ರಮದ ಬಗ್ಗೆ ದಾಖಲೆ ಇಟ್ಟು ಮಾತನಾಡುತ್ತೇನೆ. ಕಾಂಗ್ರೆಸ್ನವರು ಬನ್ನಿ ಚರ್ಚೆಗೆ, ಜಯಚಂದ್ರ ಅವರೇ ನೈಸ್ ಅಕ್ರಮದಲ್ಲಿ ಶಿವಕುಮಾರ್ ಪಾತ್ರದ ಬಗ್ಗೆ ಬರೆದಿದ್ದೀರಿ. ಅದನ್ನ ಬಹಿರಂಗಪಡಿಸಿ, ಸರ್ಕಾರ ಏಕೆ ಮೌನವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರಿನ ನೈಸ್ ರಸ್ತೆ ವಿವಾದ: ಟೋಲ್ ವಿರುದ್ಧ ಸಿಡಿದೆದ್ದ ಪ್ರತಿಪಕ್ಷಗಳು
‘1995ರ ಫೆಬ್ರವರಿ 2ರಂದು ಅಮೆರಿಕದ ಗವರ್ನರ್ ನೇತೃತ್ವದಲ್ಲಿ ಎಂಒಯು ಆಗಿದ್ದು ನಿಜ. ನಂತರ ಸಮಿತಿ ರಚಿಸಿ, ಸರ್ಕಾರದಿಂದ ಯಾವುದೇ ಹಣ ತೊಡಗಿಸದೆ ಕಂಪನಿಯೇ ಬಂಡವಾಳ ಹೂಡಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ದೇವೇಗೌಡರು ಪ್ರಧಾನಿಯಾದ ಬಳಿಕ ಬಂದವರು ಈ ಯೋಜನೆಯ ದಾರಿಯನ್ನೇ ತಪ್ಪಿಸಿದರು. ಅಮೆರಿಕದಿಂದ ಬಂದ ಮೂಲ ಕಂಪನಿಯನ್ನೇ ದೂರವಿಟ್ಟು, ಮಧ್ಯವರ್ತಿಗಳು ಕೇಳಿದ್ದನ್ನೆಲ್ಲ ಮಾಡಿಕೊಟ್ಟ ಮಹಾನುಭಾವರು ಯಾರು ಶಿವಕುಮಾರ್ ಅವರೇ?’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ತಮ್ಮ ಎದೆ ಮುಟ್ಟಿ ಹೇಳಲಿ
‘20 ಸಾವಿರ ಎಕರೆ ಪ್ರದೇಶದಲ್ಲಿ ಐದು ಟೌನ್‌ಶಿಪ್ ನಿರ್ಮಿಸಲು ಫ್ರೇಮ್‌ವರ್ಕ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಆದರೆ ಕೋರ್ಟ್ ಆದೇಶವನ್ನು ನಿಮಗೆ ಬೇಕಾದಂತೆ ತಿರುಚಿಕೊಂಡಿರಿ. ರೈತರ ಜಮೀನನ್ನು ಲೂಟಿ ಮಾಡಿ, ಬರೋಬ್ಬರಿ 1.75 ಲಕ್ಷ ಎಕರೆ ಸ್ವಾಧೀನಪಡಿಸಿಕೊಳ್ಳಲು ಹವಣಿಸಿದವರು ಯಾರು? ಇಂದು ಇಡೀ ಬೆಂಗಳೂರು ಮಳೆಗೆ ಜಲಾವೃತವಾಗಲು ಮೂಲ ಕಾರಣಕರ್ತರು ಯಾರು ಎಂದು ಕಾಂಗ್ರೆಸ್ ನಾಯಕರು ತಮ್ಮ ಎದೆ ಮುಟ್ಟಿ ಹೇಳಲಿ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ಸಿಎಂ ಡಿ.ಕೆ. ಶಿವಕುಮಾರ್ಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರ
ನನಗೆ ಎಂದಿಗೂ ಪೂರ್ಣ ಪ್ರಮಾಣದ ಸ್ವತಂತ್ರ ಅಧಿಕಾರ ಸಿಗಲಿಲ್ಲ. ರಾಮನಗರವನ್ನು ‘ಬೆಂಗಳೂರು ದಕ್ಷಿಣ’ ಎಂದು ಹೆಸರು ಬದಲಾಯಿಸಿ ಭೂಮಿಯ ಬೆಲೆ ಗಗನಕ್ಕೇರುತ್ತದೆ ಎಂದು ಡಿಕೆ ಶಿವಕುಮಾರ್ ಭ್ರಮೆ ಹುಟ್ಟಿಸಿದರು. ಕುಮಾರಕೃಪಾದಂತಹ ಪಾರಂಪರಿಕ ಕಟ್ಟಡವನ್ನು ಧ್ವಂಸ ಮಾಡಿದ ಇವರು, ವಿಧಾನಸೌಧದ ಮೆಟ್ಟಿಲು ಹಾಗೂ ಮುಖ್ಯಮಂತ್ರಿ ಕುರ್ಚಿಗೆ ಹಣೆ ಹಚ್ಚಿ ಕೇವಲ ಫೋಟೊಗೆ ಪೋಸ್ ಕೊಡುವುದರಲ್ಲೇ ಕಾಲ ಕಳೆದಿದ್ದಾರೆ. ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಿದ್ದೀರಿ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ,’ ಎಂದು ಕಿಡಿಕಾರಿದರು.
ವಿಧಾನ ಸೌಧಕ್ಕೆ ಜನರನ್ನ ನುಗ್ಗಿಸಬಲ್ಲೆ ಎಂದ ಕುಮಾರಸ್ವಾಮಿ
ವಿಧಾನ ಸೌಧಕ್ಕೆ ಜನರನ್ನ ನುಗ್ಗಿಸಬೇಕೆಂದರೆ ನುಗ್ಗಿಸಬಲ್ಲೆ, ಆದರೆ ಜೆಡಿಎಸ್ ಎಂದಿಗೂ ಕಾನೂನು ಬಾಹಿರಬಾಗಿ ನಡೆದುಕೊಂಡಿಲ್ಲ. ನಿಮ್ಮ ಹಿಂದೆ-ಮುಂದೆ ಇರುವವರೆ ನನಗೆ ಮಾಹಿತಿ ಕೊಡುವವರು ಇದ್ದಾರೆ. ದುಡ್ಡಿಗಲ್ಲ, ಅಭಿಮಾನಕ್ಕೆ ಮಾಹಿತಿ ಕೊಡುತ್ತಾರೆ. ಭ್ರಷ್ಟಾಚಾರ ಮುಕ್ತ ಮಾಡುತ್ತಾರಂತೆ. ಪ್ರಧಾನಿ ಮೋದಿ ಕಾರ್ಯಕ್ರಮದ ಬಗ್ಗೆ ಹಿಂದೆ ಟೀಕೆ ಮಾಡಿದ್ದು ನಿಜ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
