ವಾಷಿಂಗ್ಟನ್ , ಆಗಸ್ಟ್ 06: ಡೊನಾಲ್ಡ್ ಟ್ರಂಪ್(Donald Trump) ಆಡಳಿತವು ವಿದೇಶಿ ಆಮದುಗಳ ಮೇಲೆ ವಿಧಿಸಿದ್ದ ಹೆಚ್ಚುವರಿ ಆಮದು ಸುಂಕಗಳನ್ನು (Import Tariffs) ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಯುಎಸ್ ಸರ್ಕಾರವು ಕಂಪನಿಗಳಿಗೆ 100 ಶತಕೋಟಿ ಡಾಲರ್ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕ ನೀತಿಯನ್ನು ‘ಕಾನೂನುಬಾಹಿರ’ ಎಂದು ಘೋಷಿಸಿದ್ದು, ಒಟ್ಟು 166 ಬಿಲಿಯನ್ ಡಾಲರ್ ಧನಸಹಾಯ ಮತ್ತು ಮರುಪಾವತಿ ನೀಡುವಂತೆ ಆದೇಶಿಸಿದೆ. ಜುಲೈ ಅಂತ್ಯದ ವೇಳೆಗೆ ಮೊದಲ ಕಂತಿನ ಮರುಪಾವತಿ ಕಂಪನಿಗಳ ಬ್ಯಾಂಕ್ ಖಾತೆಗಳನ್ನು ತಲುಪಿದೆ.
ಆಪಲ್ ಮತ್ತು ಅಮೆಜಾನ್‌ಗೆ ಬಿಲಿಯನ್‌ಗಟ್ಟಲೆ ಮರುಪಾವತಿ: ಟೆಕ್ ದೈತ್ಯ ಆಪಲ್ 2.2 ಬಿಲಿಯನ್ ಡಾಲರ್ ಹಾಗೂ ಅಮೆಜಾನ್ (Amazon) ಸುಮಾರು 600 ಮಿಲಿಯನ್ ಡಾಲರ್ ಮರುಪಾವತಿ ಪಡೆದಿವೆ. ಅಮೆಜಾನ್ ಈ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವುದಾಗಿ ಹೇಳಿದ್ದರೆ, ಆಪಲ್ ಅಮೆರಿಕದಲ್ಲೇ ಉತ್ಪಾದನೆ ವಿಸ್ತರಿಸಲು ಬಳಸುವುದಾಗಿ ತಿಳಿಸಿದೆ.
ವಾಲ್ಮಾರ್ಟ್ (Walmart), ಕಾಸ್ಟ್ಕೊ (Costco) ಹಾಗೂ ಪೆಪ್ಸಿ (Pepsi) ಕಂಪನಿಗಳು ಈ ಮರುಪಾವತಿ ಹಣದಿಂದ ಉತ್ಪನ್ನಗಳ ಬೆಲೆಗಳನ್ನು ಇಳಿಕೆ ಮಾಡಲು ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ನಿರ್ಧರಿಸಿವೆ.
ಭಾರತೀಯ ಕಂಪನಿಗಳಿಗೆ ಸಿಗಲಿದೆಯೇ ಲಾಭ?
10 ರಿಂದ 12 ಬಿಲಿಯನ್ ಡಾಲರ್ ಸರಕುಗಳ ಮೇಲಿನ ಸುಂಕ ಹಿಂಪಡೆತ: ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವರದಿಯ ಪ್ರಕಾರ, ಸುಂಕ ಜಾರಿಯಲ್ಲಿದ್ದಾಗ ಭಾರತದಿಂದ ಅಮೆರಿಕಕ್ಕೆ ರಫ್ತಾದ ಸುಮಾರು 166 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಪೈಕಿ 10 ರಿಂದ 12 ಬಿಲಿಯನ್ ಡಾಲರ್ ಮೌಲ್ಯದ ರಫ್ತುಗಳಿಗೆ ಈ ನಿರ್ಧಾರ ಅನ್ವಯಿಸಲಿದೆ.
ಮತ್ತಷ್ಟು ಒದಿ:
ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು
ಅಮೆರಿಕದಲ್ಲಿ ತಮ್ಮ ಸ್ವಂತ ಅಂಗಸಂಸ್ಥೆಗಳನ್ನು ಹೊಂದಿರುವ ಹಾಗೂ ‘DDP’ ಆಧಾರದಲ್ಲಿ ಸಾಗಣೆ ಮಾಡಿರುವ ಭಾರತದ ಸಿಯೆಟ್ (CEAT), ಬಾಲಕೃಷ್ಣ ಇಂಡಸ್ಟ್ರೀಸ್, ಸಿಎನ್ಎಚ್ ಇಂಡಿಯಾ ಹಾಗೂ ಗೋಕಲ್ದಾಸ್ ಎಕ್ಸ್‌ಪೋರ್ಟ್ಸ್ ನಂತಹ ಪ್ರಮುಖ ಕಂಪನಿಗಳು ತಾವು ಪಾವತಿಸಿದ್ದ ಹೆಚ್ಚುವರಿ ಸುಂಕವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿವೆ.
ಹೆಚ್ಚಿನ ಸಣ್ಣ ವ್ಯಾಪಾರಿಗಳು ಈ ಮರುಪಾವತಿಯನ್ನು ಸ್ವಾಗತಿಸಿದ್ದರೂ, ಸುಂಕಗಳಿಂದ ಉಂಟಾದ ಹಾನಿಯನ್ನು ಇದು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅನೇಕ ಸಣ್ಣ ಕಂಪನಿಗಳು ನೌಕರರನ್ನು ವಜಾಗೊಳಿಸಬೇಕಾಯಿತು ಹಾಗೂ ಉಳಿತಾಯದ ಹಣವನ್ನು ಖಾಲಿ ಮಾಡಿಕೊಳ್ಳಬೇಕಾಯಿತು ಎಂದು ಅಳಲು ತೋಡಿಕೊಂಡಿವೆ.
ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್ (IEEPA) ಅಡಿಯಲ್ಲಿ ಟ್ರಂಪ್ ಆಡಳಿತವು ಚೀನಾ, ಮೆಕ್ಸಿಕೋ, ಕೆನಡಾ ಮತ್ತು ಭಾರತದ ಉತ್ಪನ್ನಗಳ ಮೇಲೆ 130 ಬಿಲಿಯನ್ ಡಾಲರ್ಗೂ ಹೆಚ್ಚು ಸುಂಕ ವಸೂಲಿ ಮಾಡಿತ್ತು. ಸುಪ್ರೀಂ ಕೋರ್ಟ್ ಈ ನಿಲುವನ್ನು ಸಂವಿಧಾನಬಾಹಿರ ಎಂದು ತೀರ್ಪು ನೀಡಿದೆ.
ಮರುಪಾವತಿ ಪ್ರಕ್ರಿಯೆಯ ಸವಾಲುಗಳು: ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ (CBP) ವಿಭಾಗದ ಮೂಲಕ ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ ಪೂರ್ಣ ಮರುಪಾವತಿ ತಲುಪಲು ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
