ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಪಕ್ಷಾಂತರ ಪರ್ವ ಅಧಿಕೃತಗೊಂಡಿದೆ. ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಇಂದು ಬೆಳಗ್ಗೆ ದೆಹಲಿಯಲ್ಲಿ ಕರೆದಿದ್ದ ಅತ್ಯಂತ ನಿರ್ಣಾಯಕ ಸಂಸದರ ಸಭೆಗೆ ಆರು ಲೋಕಸಭಾ ಸಂಸಅದರು ಗೈರಾಗುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಇರೊಂದಿಗೆ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿನ ಒಡಕು ಈಗ ಸ್ಪಷ್ಟವಾದಂತಾಗಿದೆ.
ದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಸಂಸದರು ಪಕ್ಷಾಂತರ ಮಾಡಿದ್ದ ಬೆನ್ನಲ್ಲೇ, ಈಗ ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದಲ್ಲೂ ಭಾರಿ ವಿಭಜನೆ ದೃಢಪಟ್ಟಿದೆ.
ಏನಿದು ‘ಆಪರೇಷನ್ ಟೈಗರ್’? ಯಾಕೆ ಈ ರಾಜಕೀಯ ಭೂಕಂಪ?
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ‘ಆಪರೇಷನ್ ಟೈಗರ್’ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿತ್ತು. ಉದ್ಧವ್ ಠಾಕ್ರೆ ಬಣದ ಸಂಸದರನ್ನು ಸೆಳೆದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿಸಿಕೊಳ್ಳುವ ರಹಸ್ಯ ಕಾರ್ಯಾಚರಣೆಗೆ ಈ ಹೆಸರು ಇಡಲಾಗಿದೆ.
ಈ ಬಿರುಕಿಗೆ ಮುಖ್ಯ ಕಾರಣಗಳು ಇಲ್ಲಿವೆ
ಕೇಂದ್ರದಲ್ಲಿರುವ ಎನ್‌ಡಿಎ (NDA) ಸರ್ಕಾರಕ್ಕೆ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇತ್ತೀಚೆಗಷ್ಟೇ ಬಂಗಾಳದ ಟಿಎಂಸಿ ಸಂಸದರು ಬಂದ ನಂತರವೂ ಎನ್‌ಡಿಎಗೆ ಇನ್ನೂ 46 ಸಂಸದರ ಕೊರತೆಯಿತ್ತು. ಈಗ ಉದ್ಧವ್ ಬಣದ 6 ಸಂಸದರನ್ನು ಸೆಳೆಯುವ ಮೂಲಕ ಶಿಂಧೆ ಮತ್ತು ಬಿಜೆಪಿ ಮೈತ್ರಿಕೂಟ ಕೇಂದ್ರದಲ್ಲಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.
ಮತ್ತಷ್ಟು ಓದಿ: ಶಿವಸೇನೆಯಲ್ಲಿ ಮತ್ತೊಂದು ಬಿರುಕು? ಆಪರೇಷನ್ ಟೈಗರ್ ವದಂತಿ ಬೆನ್ನಲ್ಲೇ ಉದ್ಧವ್ ಠಾಕ್ರೆ ತುರ್ತು ಸಭೆ
ಸಭೆಗೆ ಹಾಜರಾದವರು ಯಾರು?
ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ನಿನ್ನೆಯೇ ‘ಮೂರು ಸಾಲಿನ ವಿಪ್’ ಜಾರಿ ಮಾಡಲಾಗಿತ್ತು. ಆದರೂ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾದಾಗ ಕೇವಲ ನಾಲ್ಕು ಜನ ಸಂಸದರು ಮಾತ್ರ ಹಾಜರಿದ್ದರು.
ಸಂಜಯ್ ರಾವತ್
ಅನಿಲ್ ದೇಸಾಯಿ
ಅರವಿಂದ್ ಸಾವಂತ್
ರಾಜಭಾವು ವಾಜೆ
ಬಂಡಾಯವೆದ್ದ ಆರು ಸಂಸದರು ಯಾರು?
ವಿಪ್ ಜಾರಿಯಾಗಿದ್ದರೂ ಪಕ್ಷದ ಆದೇಶವನ್ನು ಧಿಕ್ಕರಿಸಿ ಸಭೆಯಿಂದ ದೂರ ಉಳಿದ 6 ಸಂಸದರ ಪಟ್ಟಿ ಇಲ್ಲಿದೆ:
ಸಂಜಯ್ ದಿನಾ ಪಾಟೀಲ್
ಸಂಜಯ್ ದೇಶಮುಖ್
ಸಂಜಯ್ (ಬಂದು) ಜಾಧವ್
ಓಂರಾಜೆ ನಿಂಬಾಳ್ಕರ್
ಸಂಜಯ್ ವಕ್ಚೌರೆ
ನಾಗೇಶ್ ಪಾಟೀಲ್ ಅಶ್ಟಿಕರ್
ಉದ್ಧವ್ ಸೇನೆಯ ಮುಂದಿನ ನಡೆ ಏನು?
ಅನರ್ಹತೆ ತೂಗುಗತ್ತಿ: ಪಕ್ಷದ ವಿಪ್ ಉಲ್ಲಂಘಿಸಿ ಸಭೆಗೆ ಗೈರಾದ ಆರು ಸಂಸದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಬಣ ಸಜ್ಜಾಗಿದೆ.
ಮೂಲಗಳ ಪ್ರಕಾರ, ಉದ್ಧವ್ ಸೇನೆಯು ಮೊದಲು ಈ ಬಂಡಾಯ ಸಂಸದರಿಗೆ ‘ಶೋಕಾಸ್ ನೋಟಿಸ್’ (ಕಾರಣ ಕೇಳಿ ನೋಟಿಸ್) ಜಾರಿ ಮಾಡಲಿದೆ. ಅದಾದ ಬಳಿಕ ಇವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತವಾಗಿ ದೂರು ನೀಡುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಈ ರಾಜಕೀಯ ಹೈಡ್ರಾಮಾ ಈಗ ದೆಹಲಿಯ ಸಂಸತ್ತಿನ ಅಂಗಳ ತಲುಪಿದೆ.
ಉದ್ಧವ್ ಬಣದಲ್ಲಿ ಒಟ್ಟು 9 ಲೋಕಸಭಾ ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಬೇಕಾದರೆ 3ನೇ 2ರಷ್ಟು ಅಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಹೊರಬರಬೇಕಿತ್ತು. ಬಂಡಾಯಗಾರರು ನಿಖರವಾಗಿ ಇದೇ ಸಂಖ್ಯೆಯನ್ನು ತಲುಪಿದ್ದಾರೆ. 2022 ರಲ್ಲಿ ಶಿಂಧೆ ಶಾಸಕರನ್ನು ವಿಭಜಿಸಿದ ಮಾದರಿಯಲ್ಲೇ, ಈಗ ಸಂಸದರನ್ನೂ ಒಡೆದು ಉದ್ಧವ್‌ಗೆ ಮತ್ತೊಂದು ಭಾರಿ ಪೆಟ್ಟು ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ