ಬೆಂಗಳೂರು, ಮೇ 04: ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸ್ಥಳಗಳಲ್ಲೊಂದಾದ ಸಿಲ್ಕ್ ಬೋರ್ಡ್ನ ಟ್ರಾಫಿಕ್ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ, ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗೆ ಡಬ್ಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣದ ಬಗ್ಗೆ ಘೋಷಣೆ ಮಾಡಿತ್ತು. ಇದರ ಕಾಮಗಾರಿ ಮುಗಿದು ಸಂಪುರ್ಣವಾಗಿ ವಾಹನಗಳ ಸಂಚಾರಕ್ಕೂ ಮುಕ್ತವಾಗಿದೆ. ಹೀಗಾಗಿ ಸುಗಮ ಸಂಚಾರದ ನಿರೀಕ್ಷೆಯಲ್ಲಿದ್ದ ಬೆಂಗಳೂರಿನ ವಾಹನಸವಾರರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ಲೈ ಓವರ್ ಮೇಲೆ ವಾಹನಗಳು ಸ್ಕಿಡ್ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಫ್ಲೈ ಓವರ್ ಮೇಲೆ ಪಾದಚಾರಿಗಳು ಹೋಗಲು ಸಣ್ಣದಾಗಿ ಕಟ್ಟೆ ಕಟ್ಟಿದ್ದು, ಇದರಿಂದ ವಾಹನಗಳು ಸಂಚಾರ ಮಾಡುವ ವೇಳೆ ಗೊತ್ತಾಗದೆ ಇದರ ಮೇಲೆ ಹತ್ತಿ ಸ್ಕಿಡ್ ಆಗುತ್ತಿದೆಯಂತೆ. ಹೀಗಾಗಿ ವಾಹನ ಸವಾರರು ಡಬಲ್ ಡೆಕ್ಕರ್ ಸಹವಾಸವೇ ಬೇಡಪ್ಪಾ ಬೇಡ ಅಂತಿದ್ದಾರೆ. ಫುಟ್ ಪಾತ್ ಇರುವ ಬಗ್ಗೆ ಒಂದು ಸೂಚನಾ ಫಲಕವನ್ನಾದರೂ ಹಾಕಬೇಕು, ಅಥವಾ ರೇಡಿಯಂ ಸ್ಟೀಕರ್, ವೈಟ್ ಪೈಂಟ್ ಬಳಿದು ಫುಟ್ ಪಾತ್ ಇರುವ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸಬೇಕು. ಆದರೆ ಅದ್ಯಾವುದೂ ಇಲ್ಲಿ ಇರದ ಕಾರಣ ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಇಲ್ಲಿ ಆಗುತ್ತಲೇ ಇವೆ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: ಬೆಂಗಳೂರಿನ ಆರ್‌ವಿ ರಸ್ತೆ-ಸಿಲ್ಕ್ ಬೋರ್ಡ್ ನಡುವಿನ ಡಬಲ್ ಡೆಕ್ಕರ್ ಫ್ಲೈಓವರ್ ಹೇಗಿದೆ ನೋಡಿ
ಇನ್ನು ಟ್ರಾಫಿಕ್ ಕಡಿಮೆ ಆಗುತ್ತೆ ಎಂದು ಡಬಲ್ ಡೆಕ್ಕರ್ ನಿರ್ಮಾಣ ಮಾಡಿದ್ದಾರೆ. ಆದರೆ ರಾಗಿಗುಡ್ಡ ಬಳಿ ಆಗುತ್ತಿರುವ ಟ್ರಾಫಿಕ್ ನಿಂದ ವಾಹನ ಸವಾರರು ಬೇಸತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಡಬಲ್ ಡೆಕ್ಕರ್ ಕಡೆ ಬರಲೇಬೇಡಿ ಎಂಬ ರೀತಿ ಆಗಿದೆ. ಫ್ಲೈ ಓವರ್ ಮೇಲೆಯೇ ಟ್ರಾಫಿಕ್ ಆಗುತ್ತಿದೆ ಎಂದು ವಾಹನ ಸವಾರರು ಅಲವತ್ತುಕೊಂಡಿದ್ದಾರೆ. 449 ಕೋಟಿ ರೂಪಾಯಿ ವೆಚ್ಚದಲ್ಲಿ 3.36 ಕಿಮೀ ವಿಸ್ತೀರ್ಣವಿರುವ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಿಸಲಾಗಿದೆ. ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಮೀ ವಿಸ್ತೀರ್ಣವನ್ನು ಇದು ಹೊಂದಿದೆ. ಕಳೆದ ವರ್ಷ ರಾಗಿಗುಡ್ಡದಿಂದ ಕೆ.ಆರ್. ಪುರ ಮತ್ತು ಹೊಸೂರು ಭಾಗದ ಕಡೆಗಿನ ಫ್ಲೈಓವರ್ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಿದ್ದರೆ, ವಾರದ ಹಿಂದೆ ಸಿಲ್ಕ್ಬೋರ್ಡ್ ಮತ್ತು ಕೆ.ಆರ್. ಪುರ ಭಾಗದಿಂದ ರಾಗಿಗುಡ್ಡ ಕಡೆ ಬರುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
