Headlines

‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ – Kannada News | Drop Doctor From Your Name; Supreme Court slams Hospitals In 4 Year Old Child Rape Case

ನವದೆಹಲಿ, ಜುಲೈ 17: ಘಾಜಿಯಾಬಾದ್‌ನ 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಅಮಾನವೀಯವಾಗಿ ನಡೆದುಕೊಂಡ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಭಾರತದ ಸುಪ್ರೀಂ ಕೋರ್ಟ್ (Supreme Court) ತೀವ್ರ ವಾಗ್ದಾಳಿ ನಡೆಸಿದೆ. “ನಿಮ್ಮ ಹೆಸರಿನ ಜೊತೆ ವೈದ್ಯರೆಂದು ಬರೆದುಕೊಳ್ಳುವ ಯಾವುದೇ ಅರ್ಹತೆ ನಿಮಗಿಲ್ಲ” ಎಂದು ನ್ಯಾಯಾಲಯ ಆಕ್ರೋಶ ಹೊರಹಾಕಿದೆ. ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಪುಟ್ಟ ಬಾಲಕಿಗೆ ತುರ್ತು ವೈದ್ಯಕೀಯ ನೆರವು ನೀಡಲು ನಿರಾಕರಿಸಿದ ಮತ್ತು ಆಕೆಯನ್ನು ಗಂಭೀರ ಸ್ಥಿತಿಯಲ್ಲಿದ್ದರೂ ಬೇರೆಡೆಗೆ ಕಳುಹಿಸಿದ ಆಸ್ಪತ್ರೆಗಳ ಧೋರಣೆಯನ್ನು ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿದೆ.

“ಅತ್ಯಾಚಾರಕ್ಕೊಳಗಾದ ಮಗು ಬಡ ಕುಟುಂಬಕ್ಕೆ ಸೇರಿದ್ದಾಳೆ ಎಂಬ ಕಾರಣಕ್ಕೆ ನೀವು ಆಕೆಯನ್ನು ನಿರ್ಲಕ್ಷಿಸಿದಿರಾ? ಮಾನವೀಯತೆ ಎಲ್ಲಿ ಹೋಯಿತು?” ಎಂದು ನ್ಯಾಯಮೂರ್ತಿ ಅತ್ಯಂತ ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ನೊಂದ ಮಗುವಿಗೆ ತಕ್ಷಣ ಚಿಕಿತ್ಸೆ ನೀಡಿ ಪ್ರಾಣ ರಕ್ಷಿಸುವುದನ್ನು ಬಿಟ್ಟು, ತಾಂತ್ರಿಕ ಕಾರಣಗಳನ್ನು ನೀಡಿ ಚಿಕಿತ್ಸೆ ನೀಡದ ವೈದ್ಯರ ವರ್ತನೆಗೆ ಸುಪ್ರೀಂ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಸುಪ್ರೀಂ ಕೋರ್ಟ್ ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ: 3 ವರ್ಷದ ಮಗು ಮೇಲೆ ಅತ್ಯಾಚಾರ ನಡೆಸಿದವನಿಗೆ ಗ್ರಾಮ ಪಂಚಾಯ್ತಿಯಿಂದ 1 ಲಕ್ಷ ರೂ. ದಂಡ; ಅದೇ ಹಣದಲ್ಲಿ ರಾತ್ರಿ ಎಣ್ಣೆ ಪಾರ್ಟಿ!

ವೈದ್ಯರೆಂದು ಕರೆದುಕೊಳ್ಳಲು ನಿಮಗೆ ಯೋಗ್ಯತೆಯಿಲ್ಲ:

“ನಿಮ್ಮ ಹೆಸರಿನ ಹಿಂದೆ ‘ಡಾಕ್ಟರ್’ ಎಂಬ ಪದವನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಿ. ಸಾಯುವ ಪರಿಸ್ಥಿತಿಯಲ್ಲಿದ್ದ ಮಗುವಿಗೆ ಸ್ಪಂದಿಸದ ನಿಮಗೆ ‘ವೈದ್ಯರು’ ಎಂದು ಕರೆದುಕೊಳ್ಳುವ ಅಥವಾ ವೈದ್ಯಕೀಯ ವೃತ್ತಿ ನಡೆಸುವ ಯಾವುದೇ ಅರ್ಹತೆಯೂ ಇಲ್ಲ” ಎಂದು ಕೋರ್ಟ್ ಛೀಮಾರಿ ಹಾಕಿದೆ.

ಏನಿದು ಘಟನೆ?:

ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಅಪಹರಣ ಮಾಡಿ, 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಭೀಕರ ಘಟನೆಯು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಬಾಲಕಿಯ ನೆರೆಹೊರೆಯ ವ್ಯಕ್ತಿಯೊಬ್ಬ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಮಗುವನ್ನು ಕರೆದೊಯ್ದಿದ್ದನು. ಮಗು ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ, ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಆ ಮಗುವನ್ನು ತಕ್ಷಣವೇ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಕೊನೆಗೆ ಮಗುವನ್ನು ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದರು.

ಇದನ್ನೂ ಓದಿ: ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಅತ್ಯಾಚಾರಕ್ಕೊಳಗಾಗಿ ರಕ್ತದ ಮಡುವಿನಲ್ಲಿ ನರಳುತ್ತಿದ್ದ 4 ವರ್ಷದ ಮಗುವನ್ನು ಚಿಕಿತ್ಸೆಗಾಗಿ ಕರೆತಂದಾಗ, 2 ಸ್ಥಳೀಯ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪಿರಲಿಲ್ಲ. ಮಗುವಿನ ಜೀವನ್ಮರಣದ ಹೋರಾಟದ ನಡುವೆಯೂ ಸೂಕ್ತ ಪ್ರಥಮ ಚಿಕಿತ್ಸೆ ನೀಡದೆ ಕಾಲಹರಣ ಮಾಡಲಾಗಿತ್ತು. ಇದಾದ ನಂತರ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಗುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿತ್ತು ಎಂದು ಆ ಮಗುವಿನ ಪೋಷಕರು ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಖಾಸಗಿ ಅಂಗಗಳಿಗೆ ತೀವ್ರ ಗಾಯಗಳಾಗಿರುವುದು ಸ್ಪಷ್ಟವಾಗಿದ್ದರೂ, ಆರಂಭದಲ್ಲಿ ಅತ್ಯಾಚಾರದ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿರಲಿಲ್ಲ. ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಅಂತಿಮವಾಗಿ ಪ್ರಕರಣದ ತನಿಖೆಯನ್ನು ಸ್ವತಂತ್ರ ಎಸ್‌ಐಟಿಗೆ ಒಪ್ಪಿಸಿತ್ತು.

ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಆದೇಶಿಸಿತ್ತು. ಈ ಎಸ್‌ಐಟಿ ತನಿಖೆಯಲ್ಲಿ ಆಸ್ಪತ್ರೆಗಳು ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಫಲವಾಗಿರುವುದು ದೃಢಪಟ್ಟಿದೆ. ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳು ಹಾಗೂ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ. ಹಾಗೇ, ಸಂಬಂಧಪಟ್ಟ ವೈದ್ಯಕೀಯ ಮಂಡಳಿಗಳಿಗೆ ಈ ಕುರಿತು ವರದಿ ಸಲ್ಲಿಸಲು ಆದೇಶಿಸಿದೆ. ಹಾಗೇ, ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಪಾವತಿಸುವಂತೆ ಎರಡೂ ಆಸ್ಪತ್ರೆಗಳಿಗೆ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:25 pm, Fri, 17 July 26

Source link

Leave a Reply

Your email address will not be published. Required fields are marked *