ನವದೆಹಲಿ, ಮಾರ್ಚ್ 5: ಡಾಲರ್ ಎದುರು 92ರ ಮಟ್ಟಕ್ಕಿಂತ ಮೇಲೆ ಹೋಗಿದ್ದ ರುಪಾಯಿ (Dollar vs Rupee) ಇವತ್ತಿನ ವಹಿವಾಟಿನಲ್ಲಿ 45 ಪೈಸೆ ಚೇತರಿಸಿಕೊಂಡಿದೆ. ಇಂಟರ್ಬ್ಯಾಂಕ್ ಫಾರೀನ್ ಎಕ್ಸ್ಚೇಂಜ್ ಟ್ರೇಡಿಂಗ್ನಲ್ಲಿ ಬುಧವಾರ ಸಂಜೆ ಡಾಲರ್ ಎದುರು 92.05ರಲ್ಲಿ ಅಂತ್ಯಗೊಂಡಿದ್ದ ರುಪಾಯಿ, ಗುರುವಾರ ಬೆಳಗ್ಗೆ 92.16ರಲ್ಲಿ ಆರಂಭ ಕಂಡಿತು. ರುಪಾಯಿ ಮೌಲ್ಯ ಒಂದು ಹಂತದಲ್ಲಿ 92.30ಕ್ಕೆ ಹೋಗಿತ್ತು. ಬಳಿಕ 91.60ರಲ್ಲಿ ಅಂತ್ಯಗೊಂಡಿತು. ಬುಧವಾರದ ಕೊನೆಯಲ್ಲಿದ್ದ ಮೌಲ್ಯಕ್ಕೆ ಹೋಲಿಸಿದರೆ ರುಪಾಯಿ 45 ಪೈಸೆಯಷ್ಟು ಚೇತರಿಕೆ ಕಂಡಿದೆ.
ಫಾರೆಕ್ಸ್ ಮಾರುಕಟ್ಟೆ ಮಂಗಳವಾರ ಹೋಳಿ ಪ್ರಯುಕ್ತ ಕಾರ್ಯನಿರ್ವಹಿಸಿರಲಿಲ್ಲ. ಸೋಮವಾರ ಡಾಲರ್ ಎದುರು ರುಪಾಯಿ 41 ಪೈಸೆ ಕುಸಿದರೆ, ಬುಧವಾರ ಬರೋಬ್ಬರಿ 56 ಪೈಸೆ ಕುಸಿದಿತ್ತು. ಗುರುವಾರವೂ ರುಪಾಯಿ ಕುಸಿಯಬಹುದು ಎಂದೇ ಹೆಚ್ಚಿನವರ ಎಣಿಕೆಯಾಗಿತ್ತು. ಆದರೆ, ಕೆಲ ವರದಿಗಳ ಪ್ರಕಾರ ಆರ್ಬಿಐ ಒಂದಷ್ಟು ಡಾಲರ್ಗಳನ್ನು ಮಾರುವುದು ಇತ್ಯಾದಿ ಕ್ರಮಗಳ ಮೂಲಕ ರುಪಾಯಿ ಕುಸಿತವನ್ನು ತಡೆಯಿತು ಎನ್ನಲಾಗಿದೆ.
ಹಾಗೆಯೇ, ರುಪಾಯಿ ಚೇತರಿಕೆಗೆ ಮತ್ತೊಂದು ಸಂಭಾವ್ಯ ಕಾರಣವೆಂದರೆ, ಈಕ್ವಿಟಿ ಮಾರುಕಟ್ಟೆಗಳಲ್ಲಿ ಷೇರುಗಳನ್ನು ಖರೀದಿಸುವ ಟ್ರೆಂಡ್ ನಡೆದಿದೆ. ಗುರುವಾರ ಸಾಂಸ್ಥಿಕ ಹೂಡಿಕೆದಾರರಿಂದ ಸಾಕಷ್ಟು ಷೇರುಗಳ ಖರೀದಿ ಆಗಿದೆ. ಇವತ್ತು ಷೇರು ಮಾರುಕಟ್ಟೆ ಹಸಿರು ಬಣ್ಣಕ್ಕೆ ತಿರುಗಲು ಇದೂ ಒಂದು ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು
ಡಾಲರ್ ಬಲ ಹೆಚ್ಚಳ, ಕಚ್ಚಾ ತೈಲ ಬೆಲೆ ಹೆಚ್ಚಳ, ವಿದೇಶೀ ಹೂಡಿಕೆಗಳ ಹೊರಹರಿವು ಈ ಅಂಶಗಳು ರುಪಾಯಿಯನ್ನು ದುರ್ಬಲ ಸ್ಥಿತಿಗೆ ತಳ್ಳಿವೆ. ಆರ್ಬಿಐ ಹೆಚ್ಚು ದಿನ ರುಪಾಯಿ ಕುಸಿತ ತಡೆಯಲು ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ, ಶುಕ್ರವಾರ ಡಾಲರ್ ಎದುರು ರುಪಾಯಿ ಪ್ರದರ್ಶನ ಹೇಗಿರುತ್ತೆ ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ತಜ್ಞರ ಪ್ರಕಾರ ಶುಕ್ರವಾರ ರುಪಾಯಿ 91.30ರಿಂದ 92.10 ಶ್ರೇಣಿಯಲ್ಲಿ ಟ್ರೇಡಿಂಗ್ ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
