ಡಾಲರ್ ಎದುರು ರುಪಾಯಿ ಮೌಲ್ಯ 67 ಪೈಸೆ ಜಿಗಿತ; 10 ದಿನದಲ್ಲಿ 100 ಪೈಸೆ ಮೌಲ್ಯ ಹೆಚ್ಚಳ – Kannada News | US Dollar vs Rupee, Indian currency value rises on Friday, know the reasons why

ಡಾಲರ್ ವರ್ಸಸ್ ರುಪಾಯಿImage Credit source: Shutterstock

ನವದೆಹಲಿ, ಜೂನ್ 12: ಡಾಲರ್ ಎದುರು ಸತತ ಕುಸಿಯುತ್ತಾ ಬಂದಿರುವ ಭಾರತದ ಕರೆನ್ಸಿ (Indian Rupee) ಶುಕ್ರವಾರದ (ಜೂನ್ 12) ವಹಿವಾಟಿನಲ್ಲಿ ಮೌಲ್ಯ ಹೆಚ್ಚಿಸಿಕೊಂಡಿದೆ. ಇಂದು ರೂಪಾಯಿ ಮೌಲ್ಯವು ಭಾರಿ ಚೇತರಿಕೆ ಕಂಡಿದ್ದು, ಬರೋಬ್ಬರಿ 67 ಪೈಸೆ ಏರಿಕೆಯೊಂದಿಗೆ 95.18 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿದೆ. ಒಂದು ಹಂತದಲ್ಲಿ 100 ರೂ ಗಡಿ ದಾಟಬಹುದು ಎನ್ನುವ ಸ್ಥಿತಿ ಇತ್ತು. ಮೇ ತಿಂಗಳ ಮೂರನೇ ವಾರದಲ್ಲಿ ಡಾಲರ್ ಎದುರು ಭಾರತೀಯ ಕರೆನ್ಸಿ ಮೌಲ್ಯ 96.57 ಮಟ್ಟದಲ್ಲಿತ್ತು. ಅಲ್ಲಿಂದೀಚೆ ರುಪಾಯಿ 1.39 ನಷ್ಟು ಚೇತರಿಕೆ ಕಂಡಿದೆ.

ರೂಪಾಯಿ ಮೌಲ್ಯ ಹೆಚ್ಚಲು ಕಾರಣಗಳೇನು?

  • ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಇರಾನ್ ಜೊತೆ ಶೀಘ್ರದಲ್ಲೇ ಶಾಂತಿ ಒಪ್ಪಂದ ಏರ್ಪಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಕಳೆದ ಎರಡು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ ಬ್ಯಾರೆಲ್‌ಗೆ 88.80 ಡಾಲರ್‌ಗೆ ಕುಸಿದಿದೆ.
  • ಭಾರತದ ಮೇಲಿನ ಆರ್ಥಿಕ ಒತ್ತಡ ಇಳಿಕೆ: ಭಾರತವು ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದಾಗ ಭಾರತಕ್ಕೆ ಡಾಲರ್ ಪಾವತಿಸುವ ಒತ್ತಡ ಕಡಿಮೆಯಾಗುತ್ತದೆ. ಇದು ರೂಪಾಯಿ ಮೌಲ್ಯ ಬಲಗೊಳ್ಳಲು ನೇರ ಕಾರಣವಾಗಿದೆ.
  • ಜಾಗತಿಕ ಮಾರುಕಟ್ಟೆಯ ಚೇತರಿಕೆ: ಟ್ರಂಪ್ ಅವರ ಹೇಳಿಕೆಯಿಂದಾಗಿ ಏಷ್ಯಾದ ಶೇರು ಮಾರುಕಟ್ಟೆಗಳು ಚೇತರಿಕೆ ಕಂಡಿದ್ದು, ಯುಎಸ್ ಟ್ರೆಜರಿ ಮೌಲ್ಯ ಮತ್ತು ಡಾಲರ್ ಸೂಚ್ಯಂಕ ಸ್ವಲ್ಪ ಮಟ್ಟಿಗೆ ಕುಸಿದಿದೆ.

ಇದನ್ನೂ ಓದಿ: ಕೀನಾ ಏರ್​ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ನಿನ್ನೆ ಗುರುವಾರ ರೂಪಾಯಿ ಮೌಲ್ಯವು 60 ಪೈಸೆ ಕುಸಿದು 95.85 ರೂ. ನಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇಂದಿನ ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೊದಲು 95.40 ರೂ. ನಲ್ಲಿ ಆರಂಭವಾಗಿ, ನಂತರ ಮತ್ತಷ್ಟು ಬಲಗೊಂಡು 95.18 ರೂ. ಗರಿಷ್ಠ ಮಟ್ಟವನ್ನು ತಲುಪಿತು.

ಆದಾಗ್ಯೂ, ಇರಾನ್ ಕಡೆಯಿಂದ ಅಧಿಕೃತ ಒಪ್ಪಂದದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬೀಳದ ಕಾರಣ ಹೂಡಿಕೆದಾರರು ಸದ್ಯಕ್ಕೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *