ನವದೆಹಲಿ, ಮೇ 22: ಡಾಲರ್ ಎದುರು ರುಪಾಯಿ ಮೌಲ್ಯ (Dollar vs Rupee) ಕಳೆದ ಎರಡು ದಿನದಿಂದ ಸ್ವಲ್ಪ ಚೇತರಿಸಿಕೊಂಡಿದೆ. ಆದರೂ ಕೂಡ ಇತ್ತೀಚಿನ ವರ್ಷಗಳಿಂದ ರುಪಾಯಿ ಮೌಲ್ಯ ಸಿಕ್ಕಾಪಟ್ಟೆ ಕುಸಿದಿದೆ. ಇನ್ನೂ ಕೂಡ ಪ್ರತೀ ಡಾಲರ್‌ಗೆ ರುಪಾಯಿ ಮೌಲ್ಯ 96ರ ಗಡಿ ಮೇಲೆಯೇ ಇದೆ. ಬಹಳಷ್ಟು ಜನರು ರುಪಾಯಿ ಮೌಲ್ಯ ಕುಸಿತದ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೇ ವೇಳೆ, ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ (Arvind Panagariya) ಅವರು ರುಪಾಯಿ ಮೌಲ್ಯ ಏರಿಳಿತದ ಬಗ್ಗೆ ಸದ್ಯ ಹೆಚ್ಚು ಚಿಂತೆ ಮಾಡುವ ಪ್ರಮೇಯ ಇಲ್ಲ ಎಂದಿದ್ದಾರೆ. ರುಪಾಯಿ ಕುಸಿತ ತಡೆಯಲು ಆರ್‌ಬಿಐ ತನ್ನ ಫಾರೆಕ್ಸ್ ನಿಧಿಯನ್ನು ವ್ಯಯಿಸಲು ಹೋಗಬಾರದು. ರುಪಾಯಿ ಸಹಜವಾಗಿ ಕುಸಿಯಲು ಬಿಡಬೇಕು ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆದ ಅವರು ಸಲಹೆ ನೀಡಿದ್ದಾರೆ.
‘100 ಎಂಬುದು ಕೇವಲ ಒಂದು ಸಂಖ್ಯೆ’
ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪನಗರಿಯಾ, “ಪ್ರತಿ ಡಾಲರ್‌ಗೆ 100 ರೂಪಾಯಿ ಆಗುತ್ತದೆ ಎಂಬ ಮಾನಸಿಕ ಆತಂಕ ನಿಮ್ಮ (ಆರ್‌ಬಿಐ) ನೀತಿ ನಿರ್ಧಾರಗಳನ್ನು ನಿಯಂತ್ರಿಸಲು ಬಿಡಬೇಡಿ. 99 ಮತ್ತು 101 ರಂತೆ 100 ಸಹ ಕೇವಲ ಒಂದು ಸಂಖ್ಯೆಯಷ್ಟೇ. ಪ್ರಸ್ತುತ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು ತಾತ್ಕಾಲಿಕವಾಗಿರಲಿ ಅಥವಾ ದೀರ್ಘಕಾಲದ್ದಾಗಿರಲಿ, ಈ ಕ್ಷಣದಲ್ಲಿ ರೂಪಾಯಿ ಅಪಮೌಲ್ಯಗೊಳ್ಳಲು (Depreciate) ಬಿಡುವುದೇ ಸರಿಯಾದ ಕ್ರಮ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್
ಜಾಗತಿಕ ಇಂಧನ ಮಾರುಕಟ್ಟೆಯ ಏರಿಳಿತಗಳಿಗೆ ಭಾರತೀಯ ಆರ್ಥಿಕತೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಹೀಗೆ ವಿವರಿಸಿದ್ದಾರೆ:
ತಾತ್ಕಾಲಿಕ ಬಿಕ್ಕಟ್ಟಾಗಿದ್ದರೆ (3 ತಿಂಗಳಿಂದ 1 ವರ್ಷ) ರೂಪಾಯಿ ಮೌಲ್ಯ ಈಗ ಕುಸಿದರೂ, ತೈಲ ಆಮದು ವೆಚ್ಚ ಕಡಿಮೆಯಾದ ತಕ್ಷಣ ಮತ್ತು ವಿದೇಶಿ ಹೂಡಿಕೆದಾರರು ‘ಅಗ್ಗದ ರೂಪಾಯಿ’ಯ ಲಾಭ ಪಡೆಯಲು ಭಾರತದತ್ತ ಮುಖ ಮಾಡಿದಾಗ ರೂಪಾಯಿ ಮೌಲ್ಯ ಮತ್ತೆ ಗಣನೀಯವಾಗಿ ಚೇತರಿಸಿಕೊಳ್ಳುತ್ತದೆ.
ದೀರ್ಘಕಾಲದ ಬಿಕ್ಕಟ್ಟಾಗಿದ್ದ (ಒಂದು ವರ್ಷಕ್ಕಿಂತ ಹೆಚ್ಚು) ಪರಿಸ್ಥಿತಿಯಲ್ಲಿ, ರೂಪಾಯಿ ಕುಸಿತವನ್ನು ತಡೆಯಲು ಪ್ರಯತ್ನಿಸುವುದು ತಪ್ಪು ನಿರ್ಧಾರವಾಗುತ್ತದೆ. ಕೃತಕವಾಗಿ ರೂಪಾಯಿಯನ್ನು ರಕ್ಷಿಸಲು ಹೋದರೆ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಸಂಪೂರ್ಣವಾಗಿ ಖಾಲಿಯಾಗುವವರೆಗೂ ರಕ್ತಸ್ರಾವ ಮುಂದುವರಿಯುತ್ತದೆ.
ತಾತ್ಕಾಲಿಕ ಪರಿಹಾರಗಳು ಅನಗತ್ಯ: ಅರವಿಂದ್ ಪನಗರಿಯಾ
ಆರ್‌ಬಿಐ ರೂಪಾಯಿ ರಕ್ಷಣೆಗಾಗಿ ಡಾಲರ್ ಬಾಂಡ್‌ಗಳನ್ನು ಬಿಡುಗಡೆ ಮಾಡುವುದು ಅಥವಾ ಅನಿವಾಸಿ ಭಾರತೀಯರ (NRI) ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡುವುದನ್ನು ಪರಿಗಣಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇವು ಕೇವಲ ತಾತ್ಕಾಲಿಕ ಮುಲಾಮುಗಳಷ್ಟೇ (Band-aid) ಹೊರತು ಶಾಶ್ವತ ಪರಿಹಾರವಲ್ಲ. ಇವುಗಳಿಂದ ವಿದೇಶಿ ಶ್ರೀಮಂತ ಹೂಡಿಕೆದಾರರಿಗೆ ಮಾತ್ರ ಲಾಭವಾಗುತ್ತದೆ. ಅಂತಿಮವಾಗಿ ರುಪಾಯಿ ಮೌಲ್ಯ 100 ರ ಗಡಿಯನ್ನು ದಾಟಲೇಬೇಕಾಗುತ್ತದೆ ಎಂದು ನೀತಿ ಆಯೋಗ್ನ ಮಾಜಿ ಉಪಾಧ್ಯಕ್ಷರೂ ಆದ ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?
2013ರ ಕರೆನ್ಸಿ ಬಿಕ್ಕಟ್ಟಿಗೆ ಹೋಲಿಸಿದರೆ ಪ್ರಸ್ತುತ ಭಾರತದ ಸ್ಥಿತಿ ಅತ್ಯಂತ ಸದೃಢವಾಗಿದೆ. ಅಂದು ದೇಶದಲ್ಲಿ ಹಣದುಬ್ಬರ (Inflation) ಎರಡಂಕಿ ದಾಟಿತ್ತು, ಆದರೆ ಪ್ರಸ್ತುತ ಹಣದುಬ್ಬರ ನಿಯಂತ್ರಣದಲ್ಲಿದೆ. ಆದ್ದರಿಂದ ರೂಪಾಯಿ ಅಪಮೌಲ್ಯದಿಂದ ಎದುರಾಗಬಹುದಾದ ಸಾಧಾರಣ ಹಣದುಬ್ಬರದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಭಾರತದ ಆರ್ಥಿಕತೆಗೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಉದ್ವಿಗ್ನತೆ ಹಾಗೂ ತೈಲ ಬೆಲೆ ಏರಿಕೆಯ ಒತ್ತಡದಿಂದಾಗಿ ಇತ್ತೀಚೆಗೆ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ ದಾಖಲೆಯ 97 ರೂಪಾಯಿಗಳ ಸಮೀಪಕ್ಕೆ ತಲುಪಿತ್ತು. ಆರ್‌ಬಿಐ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ರೂಪಾಯಿ ಮತ್ತಷ್ಟು ಕುಸಿಯದಂತೆ ತಡೆದಿತ್ತು. ಆದರೆ, ವಾರ್ಷಿಕ ಮುಂಗಡ ಮಾರುಕಟ್ಟೆಯಲ್ಲಿ (Forward Market) ಡಾಲರ್ ಮೌಲ್ಯ ಈಗಾಗಲೇ 100 ರ ಗಡಿಯನ್ನು ದಾಟಿರುವುದನ್ನು ತಜ್ಞರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪನಗರಿಯಾ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
