ಕನ್ನಡದ ವರನಟ ಡಾ. ರಾಜ್‌ಕುಮಾರ್ (Dr Rajkumar) ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಾಡುಗಳ್ಳ ವೀರಪ್ಪನ್‌ನ (Veerappan) ಒಂಬತ್ತು ಮಂದಿ ಸಹಚರರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ (ಫೆಬ್ರವರಿ 26) ವಜಾಗೊಳಿಸಿದೆ. ಇದರೊಂದಿಗೆ, 2018ರಲ್ಲಿ ಗೋಪಿಶೆಟ್ಟಿಪಾಳ್ಯದ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ (Madras High Court) ಎತ್ತಿಹಿಡಿದಂತಾಗಿದೆ. ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ.
2000ನೇ ಇಸವಿಯ ಜುಲೈ 30ರಂದು ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಇರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ತಂಡ ಅಪಹರಿಸಿತ್ತು. ಸುಮಾರು 108 ದಿನಗಳ ಕಾಲ ಅವರನ್ನು ಅರಣ್ಯದಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಈ ಘಟನೆಯು ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಈ ಪ್ರಕರಣದಲ್ಲಿ ವೀರಪ್ಪನ್ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ, 2004ರಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮತ್ತು ಸೇತುಮಣಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. ಮತ್ತೊಬ್ಬ ಆರೋಪಿ ರಮೇಶ್ ಎಂಬಾತ ಇದುವರೆಗೂ ಪತ್ತೆಯಾಗಿಲ್ಲ. ಉಳಿದ 9 ಮಂದಿಯಾದ ಗೋವಿಂದರಾಜ್, ಅಂದ್ರಿಲ್, ಪಸುವಣ್ಣ, ಪುಟ್ಟುಸ್ವಾಮಿ, ಕಾಲ್ಮಂದಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ವಿರುದ್ಧ ಸುದೀರ್ಘ 18 ವರ್ಷಗಳ ಕಾಲ ವಿಚಾರಣೆ ನಡೆದಿತ್ತು.
ಇದನ್ನೂ ಓದಿ: ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್ಗೆ ಹೇಳಿದ್ರಂತೆ ರಾಜ್‌ಕುಮಾರ್
ಸುಮಾರು 10 ನ್ಯಾಯಮೂರ್ತಿಗಳು ಬದಲಾದ ಈ ಸುದೀರ್ಘ ಕಾನೂನು ಹೋರಾಟವು 2018ರ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಅಂದು ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪಿನಿಂದ ಅತೃಪ್ತಗೊಂಡಿದ್ದ ತಮಿಳುನಾಡು ಸರ್ಕಾರ 2019ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಐದು ವರ್ಷಗಳ ನಂತರ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಅಂತಿಮಗೊಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
