ನವದೆಹಲಿ, ಜೂನ್ 24: ಡಿಜಿಟಲ್ ವಹಿವಾಟುಗಳಲ್ಲಿ ಹೆಚ್ಚುತ್ತಿರುವ ವಂಚನೆಗಳನ್ನು ತಡೆಗಟ್ಟಲು ಮತ್ತು ಗ್ರಾಹಕರ ಹೊಣೆಗಾರಿಕೆಯನ್ನು (Customer Liability) ಮಿತಿಗೊಳಿಸಲು ಆರ್‌ಬಿಐ ತನ್ನ ನಿಯಮಾವಳಿಗಳನ್ನು ವಿಸ್ತರಿಸಿದೆ. ವಂಚಕರು ಅಧಿಕೃತ ವ್ಯಕ್ತಿಗಳಂತೆ ನಟಿಸಿ ಗ್ರಾಹಕರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣಗಳನ್ನು (Scams) ಕೂಡ ಈಗ ಈ ಹೊಸ ನಿಯಮಗಳ ಅಡಿಯಲ್ಲಿ ತರಲಾಗಿದೆ. ಜೊತೆಗೆ ಸಣ್ಣ ಮೊತ್ತದ ಡಿಜಿಟಲ್ ವಂಚನೆಗೆ ಒಳಗಾದವರಿಗೆ ವಿಶೇಷ ಪರಿಹಾರ ವ್ಯವಸ್ಥೆಯನ್ನು ಆರ್‌ಬಿಐ ಪರಿಚಯಿಸಿದೆ.
ಸಣ್ಣ ಮೊತ್ತದ ವಂಚನೆಗೆ ಸಿಗುವ ಪರಿಹಾರ ಎಷ್ಟು?
ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಂಚನೆಯಿಂದಾಗಿ 50,000 ರೂವರೆಗೆ ನಷ್ಟ ಅನುಭವಿಸಿದ ಸಂತ್ರಸ್ತರು (Bona fide victims) ಈ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇಂತಹ ಸಂತ್ರಸ್ತರು ತಮ್ಮ ಒಟ್ಟು ನಷ್ಟದ ಶೇ. 85 ರಷ್ಟು ಪರಿಹಾರವನ್ನು ಪಡೆಯಬಹುದು. ಆದರೆ, ಈ ಪರಿಹಾರದ ಗರಿಷ್ಠ ಮಿತಿ 25,000 ರೂ ಆಗಿರುತ್ತದೆ.
ಒಬ್ಬ ಗ್ರಾಹಕರು ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಈ ರೀತಿಯ ಪರಿಹಾರವನ್ನು ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: ಅಮೆರಿಕದಿಂದ ತವರಿಗೆ ಬಂದ ಭಾರತ ಮೂಲದ ಎಐ ಸಂಶೋಧಕ; ಭಾರತದಲ್ಲಿ ಮಹತ್ವದ ಎಐ ಪ್ರಾಜೆಕ್ಟ್ನಲ್ಲಿ ಭಾಗಿ?
ಆರ್ಬಿಐನ ಹೊಸ ನಿಯಮಗಳು ಯಾವೆಲ್ಲಾ ಪ್ರಕರಣಗಳಿಗೆ ಅನ್ವಯಿಸುತ್ತವೆ?
ವಂಚಕರು ಗ್ರಾಹಕರ ಬ್ಯಾಂಕಿಂಗ್ ವಿವರಗಳನ್ನು (Credentials) ಅಕ್ರಮವಾಗಿ ಪಡೆದುಕೊಂಡು ನಡೆಸುವ ವಹಿವಾಟುಗಳು.
ಗ್ರಾಹಕರಿಗೆ ಬಲವಂತ ಅಥವಾ ಬೆದರಿಕೆ (Coercion or Duress) ಹಾಕಿ ಅವರಿಂದಲೇ ವಹಿವಾಟುಗಳಿಗೆ ಅನುಮೋದನೆ ಪಡೆದುಕೊಂಡಿರುವ ಪ್ರಕರಣಗಳು.
ಬ್ಯಾಂಕುಗಳಿಗೆ ಆರ್‌ಬಿಐ ನೀಡಿರುವ ಗಡುವು
- ದೇಶೀಯ ವಂಚನೆ ಪ್ರಕರಣಗಳಲ್ಲಿ, ಬ್ಯಾಂಕುಗಳು ಗ್ರಾಹಕರಿಂದ ದೂರು ಬಂದ 45 ದಿನಗಳ ಒಳಗಾಗಿ ತನಿಖೆ ನಡೆಸಿ ಹೊಣೆಗಾರಿಕೆಯನ್ನು ನಿರ್ಧರಿಸಬೇಕು.
- ಅಂತಾರಾಷ್ಟ್ರೀಯ (Cross-border) ವಂಚನೆಗಳಲ್ಲಿ, ತನಿಖೆ ಮುಗಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಈ ನಿಗದಿತ ಅವಧಿ ಮೀರಿದರೆ, ಅದಕ್ಕೆ ಸೂಕ್ತ ಕಾರಣವನ್ನು ಬ್ಯಾಂಕುಗಳು ಗ್ರಾಹಕರಿಗೆ ಲಿಖಿತವಾಗಿ ತಿಳಿಸಬೇಕು.
- ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳಾದರೆ, ಗ್ರಾಹಕರು ದೂರು ನೀಡಿದ 5 ದಿನಗಳ ಒಳಗಾಗಿ, ವಿವಾದಿತ ಮೊತ್ತಕ್ಕೆ ಸಮನಾದ ತಾತ್ಕಾಲಿಕ ಹಣವನ್ನು (Shadow Reversal) ಬ್ಯಾಂಕುಗಳು ಗ್ರಾಹಕರ ಖಾತೆಗೆ ಜಮಾ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ
ಆರ್‌ಬಿಐ ತೆಗೆಕೊಂಡ ಇತರ ಪ್ರಮುಖ ನಿರ್ಧಾರಗಳು
SMS ಅಲರ್ಟ್‌ಗಳು: ₹500 ಕ್ಕಿಂತ ಹೆಚ್ಚಿನ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಬ್ಯಾಂಕುಗಳು ಕಡ್ಡಾಯವಾಗಿ ತಕ್ಷಣದ SMS ಅಲರ್ಟ್‌ಗಳನ್ನು ಕಳುಹಿಸುವ ನಿಯಮವನ್ನು ಆರ್‌ಬಿಐ ಮುಂದುವರಿಸಿದೆ. ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಸಾಮಾನ್ಯ ಗ್ರಾಹಕರಿಗೂ ಇದು ತಲುಪಬೇಕು ಎಂಬುದು ಆರ್‌ಬಿಐ ಉದ್ದೇಶವಾಗಿದೆ.
ಅನುಷ್ಠಾನ ದಿನಾಂಕ: ಈ ಪರಿಷ್ಕೃತ ನಿಯಮಗಳು ಜನವರಿ 1, 2027 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
