Ayurveda Expert Shares The Right Way To Eat Dry FruitsImage Credit source: Getty Images
ಡ್ರೈ ಫ್ರೂಟ್ಸ್ (Dry Fruits) ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವುಗಳನ್ನು ಆರೋಗ್ಯಕರ ಆಹಾರಗಳೆಂದು ಪರಿಗಣಿಸಲಾಗುತ್ತದೆ. ಬಾದಾಮಿ, ಗೋಡಂಬಿ, ಅಖರೋಟ್, ಖರ್ಜೂರ ಮೊದಲಾದವುಗಳಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸದಿದ್ದರೆ ದೇಹದ ಉಷ್ಣತೆ ಹೆಚ್ಚಾಗಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ಹಾಗದರೆ ಡ್ರೈ ಫ್ರೂಟ್ಸ್ ತಿನ್ನುವುದಕ್ಕೆ ಸರಿಯಾದ ವಿಧಾನ ಯಾವುದು, ಹೆಚ್ಚು ಉಷ್ಣ ಗುಣ ಹೊಂದಿರುವ ಡ್ರೈ ಫ್ರೂಟ್ಸ್ ಯಾವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡ್ರೈ ಫ್ರೂಟ್ಸ್ ಹೇಗೆ ತಿನ್ನಬೇಕು?
ಆಯುರ್ವೇದದ ಪ್ರಕಾರ, ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ಅನ್ನು ನೇರವಾಗಿ ತಿನ್ನುವುದಕ್ಕಿಂತ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸುವುದು ಉತ್ತಮ. ಇದರಿಂದ ಫೈಟಿಕ್ ಆಮ್ಲ ಕಡಿಮೆಯಾಗುತ್ತದೆ, ಪೋಷಕಾಂಶಗಳು ಸುಲಭವಾಗಿ ಹೀರಲ್ಪಡುತ್ತವೆ ಮತ್ತು ದೇಹದ ಉಷ್ಣತೆ ಹೆಚ್ಚುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ದಿನಕ್ಕೆ 20–30 ಗ್ರಾಂ ಮೀರದಂತೆ ಸೇವಿಸುವುದು ಸೂಕ್ತ. ಅದರಲ್ಲಿಯೂ ಬಿಸಿಲು ಹೆಚ್ಚಿದ್ದಾಗ ನೇರವಾಗಿ ತಿನ್ನುವುದು ಒಳ್ಳೆಯದಲ್ಲ.
ಹೆಚ್ಚು ಉಷ್ಣ ಗುಣ ಹೊಂದಿರುವ ಡ್ರೈ ಫ್ರೂಟ್ಸ್:
ಒಣ ಖರ್ಜೂರ, ಅಖರೋಟ್, ನೆನೆಸದ ಬಾದಾಮಿ ಹಾಗೂ ಪಿಸ್ತಾ ದೇಹದಲ್ಲಿ ಉಷ್ಣತೆ ಹೆಚ್ಚಿಸಬಹುದು. ಬೇಸಿಗೆಯಲ್ಲಿ ಇವುಗಳನ್ನು ಮಿತವಾಗಿ ಹಾಗೂ ಸಾಧ್ಯವಾದರೆ ನೆನೆಸಿ ಸೇವಿಸುವುದು ಒಳಿತು. ಅತಿಯಾಗಿ ತಿಂದರೆ ಹೊಟ್ಟೆ ಉರಿ, ಮೊಡವೆ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ನೆನೆಸಿದ ಬಾದಾಮಿ, ಒಣದ್ರಾಕ್ಷಿ, ನೆನೆಸಿದ ಗೋಡಂಬಿ ಹಾಗೂ ಖರ್ಜೂರವನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು. ವಿಶೇಷವಾಗಿ ಮಖಾನಾ (ಫಾಕ್ಸ್ ನಟ್ಸ್) ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಉತ್ತಮ ಸ್ನ್ಯಾಕ್ ಆಗಿರುತ್ತದೆ.
ಡ್ರೈ ಫ್ರೂಟ್ಸ್ ತಿನ್ನುವುದನ್ನು ಸಂಪೂರ್ಣವಾಗಿ ಬಿಡುವ ಅಗತ್ಯವಿಲ್ಲ. ಆದರೆ ಋತುವಿಗೆ ಅನುಗುಣವಾಗಿ ಸರಿಯಾದ ವಿಧಾನದಲ್ಲಿ ಮತ್ತು ಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಅವುಗಳ ಆರೋಗ್ಯ ಪ್ರಯೋಜನಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಮಧುಮೇಹ, ಅತಿಯಾದ ತೂಕ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ತಮ್ಮ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಸೇವಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
