ಹಿಂದಿನ ಕಾಲದಲ್ಲಿ ಇದ್ದಂತೆ, ಈಗ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಯಾವುದೇ ತಾರತಮ್ಯವಿಲ್ಲ. ಹೆಣ್ಣು ಗಂಡು ಇಬ್ಬರನ್ನೂ ಸಮಾನಾಗಿ ಬೆಳೆಸಲಾಗುತ್ತದೆ. ಈಗಂತೂ ಪ್ರತಿಯೊಬ್ಬ ಪೋಷಕರು ತಮ್ಮ ಮಗಳು (daughter) ಆತ್ಮವಿಶ್ವಾಸ, ಬುದ್ಧಿವಂತ ಮತ್ತು ಬಲಶಾಲಿಯಾಗಿರಬೇಕೆಂದು ಬಯಸುತ್ತಾರೆ. ಇದಕ್ಕೆ ಕೇವಲ ಉತ್ತಮ ಶಿಕ್ಷಣ ನೀಡಿದರೆ ಸಾಕಾಗುವುದಿಲ್ಲ ಕೆಲವೊಂದು ಜೀವನ ಪಾಠಗಳನ್ನು ಸಹ ಕಲಿಸಬೇಕಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಈ ಕೆಲವೊಂದು ಜೀವನ ಪಾಠಗಳನ್ನು ಅಗತ್ಯವಾಗಿ ಕಲಿಸಲೇಬೇಕು. ಇವೆಲ್ಲವೂ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು, ಯಶಸ್ವಿ ಮಹಿಳೆಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಪೋಷಕರು ತಮ್ಮ ಮಗಳಿಗೆ ಕಲಿಸಲೇಬೇಕಾದ ಆ ಜೀವನ ಪಾಠಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೋಷಕರು ತಮ್ಮ ಮಗಳಿಗೆ ಕಲಿಸಬೇಕಾದ ಪಾಠಗಳೇನು?
ಸ್ವಾವಲಂಬಿಯಾಗುವುದು ಬದುಕುವುದು: ಸ್ವಾವಲಂಬಿಯಾಗಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಮಗಳಿಗೆ ಕಲಿಸಬೇಕು. ಮದುವೆಯ ನಂತರ ಗಂಡನ ಮೇಲೆ ಮತ್ತು ಮದುವೆಗೆ ಮೊದಲು ತಂದೆಯ ಮೇಲೆ ಅವಲಂಬಿತರಾಗುವುದು ಸರಿಯಲ್ಲ, ಹಾಗಾಗಿ ಆರ್ಥಿಕವಾಗಿ ಸಬಲರಾಗಲು ಉತ್ತಮ ಶಿಕ್ಷಣ, ಸರಿಯಾದ ತರಬೇತಿಯನ್ನು ಪಡೆಯಬೇಕು ಎಂಬುದನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಿ. ಸ್ವಾವಲಂಬಿ ಜೀವನದ ಮಹತ್ವವನ್ನು ತಿಳಿಸಿಕೊಡಿ. ಖಂಡಿತವಾಗಿಯೂ ಇದರಿಂದ ನಿಮ್ಮ ಮಗಳು ಶಿಕ್ಷಣದ ಮಹತ್ವ ಹಾಗೂ ಸ್ವಾವಲಂಬಿ ಜೀವನ ನಡೆಸುವುದು ಬಹಳ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾಳೆ.
ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಕಲಿಸಿ: ಪ್ರತಿಯೊಂದು ವಿಚಾರಕ್ಕೂ ಗದರುವುದು ಅಥವಾ ಕಂಟ್ರೋಲ್ ಮಾಡುವ ಬದಲು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪೋಷಕರು ಅವರಿಗೆ ಮಾರ್ಗದರ್ಶನ ನೀಡಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಸಬೇಕು. ಇದು ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.
ಎಲ್ಲರೂ ನಿಮ್ಮನ್ನು ಇಷ್ಟಪಡುವುದಿಲ್ಲ: ಹೆಣ್ಣುಮಕ್ಕಳಿಗೆ ಈ ಸಂಗತಿಯನ್ನು ಕಲಿಸುವುದು ಮುಖ್ಯ. ಕೆಲವರು ನಮ್ಮನ್ನು ಹೊಗಳುತ್ತಾರೆ, ಇನ್ನು ಕೆಲವರು ಬೇಕು ಬೇಕಂತಲೇ ಟೀಕಿಸುತ್ತಾರೆ. ಆದರೆ ಅದರರ್ಥ ನಾವು ಸರಿಯಿಲ್ಲ ಎಂದರ್ಥವಲ್ಲ, ಇತರರ ಮಾತುಗಳನ್ನು ಕೇಳಿ ನಮ್ಮನ್ನು ನಾವು ಕಡಿಮೆ ಅಂದಾಜು ಮಾಡಬಾರದು.ಇದು ನಮ್ಮನ್ನೇ ಕುಗ್ಗಿಸುತ್ತದೆ. ಹಾಗಾಗಿ ನಮಗಾಗಿ ನಾವು ಬದುಕಬೇಕು, ಇತರರ ಕೊಂಕು ಮಾತುಗಳಿಗೆ ತಲೆ ಕೆಡಿಸುವ ಅವಶ್ಯಕತೆಯಿಲ್ಲ ಎಂಬುದನ್ನು ಕಲಿಸಬೇಕು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಯೌವನಲ್ಲಿ ಕಲಿಯುವ ಈ ವಿಷಯಗಳು ನಿಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ
ಸ್ವಾತಂತ್ರ್ಯವಾಗಿ ಬದುಕುವುದನ್ನು ಕಲಿಸಿ: ಹೆಣ್ಣು ಮಕ್ಕಳಿಗೆ ಸ್ವತಂತ್ರವಾಗಿ ಬದುಕುವುದರ ನಿಜವಾದ ಅರ್ಥವನ್ನು ಕಲಿಸಿ. ಬೇರೆಯವರು ತಮ್ಮ ಜೀವನವನ್ನು ನಿಯಂತ್ರಿಸಲು ಬಿಡುವುದು ತಪ್ಪು, ಸಹಾಯಕ್ಕಾಗಿ ಇತರರನ್ನು ಕಾಯುವ ಯಾವುದೇ ಅವಶ್ಯಕತೆಯಿಲ್ಲ ಎಂದು ಸ್ವಂತಂತ್ರವಾಗಿ ಬದುಕುವ ಬಗ್ಗೆ ಕಲಿಸಿ. ಮತ್ತು ಎಲ್ಲದಕ್ಕೂ ತಲೆಯಾಡಿಸದೆ ಇಲ್ಲ ಎಂದು ಧೈರ್ಯದಿಂದ ಹೇಳಲು ಕಲಿಸಿ. ಇದು ನಿಮ್ಮ ಮಗಳು ಇತರರ ಪ್ರಭಾವಕ್ಕೊಳಗಾಗುವುದನ್ನು ತಡೆಯುತ್ತದೆ. ಜೊತೆಗೆ ಇದು ಆತ್ಮವಿಶ್ವಾಸದ ಸಂಕೇತವೂ ಹೌದು.
ನಿಮ್ಮ ಮೇಲೆ ನಂಬಿಕೆ ಇಡಿ: ನಮ್ಮಲ್ಲಿ ನಮಗೆ ವಿಶ್ವಾಸವಿದ್ದರೆ ಜೀವನದಲ್ಲಿ ಎಂತಹದ್ದೇ ಕಷ್ಟಗಳನ್ನು ಎದುರಿಸಲು, ಜಯಿಸಲು ಸಾಧ್ಯ. ಆದ್ದರಿಂದ ನಿಮ್ಮ ಹೆಣ್ಣುಮಕ್ಕಳಿಗೆ ತಮ್ಮನ್ನು ತಾವು ಪ್ರೀತಿಸಲು ಮತ್ತು ತಮ್ಮಲ್ಲಿ ವಿಶ್ವಾಸ ಹೊಂದಲು ಕಲಿಸಿ. ಇತರರಿಗಿಂತ ದುರ್ಬಲರು ಎಂದು ತಮ್ಮ ಬಗ್ಗೆ ತಾವೇ ಕೀಳರಿಮೆ ಹೊಂದಿದ್ದರೆ, ಇದರಿಂದ ಅವರ ಆತ್ಮವಿಶ್ವಾಸವು ಹಾಳಾಗುತ್ತದೆ. ಹಾಗಾಗಿ ಸಕಾರಾತ್ಮಕವಾಗಿ ಯೋಚಿಸುವುದನ್ನು, ನಮ್ಮ ಮೇಲೆ ನಾವು ನಂಬಿಕೆ ಇಡುವುದು ಎಷ್ಟು ಮುಖ್ಯ ಎಂಬುದನ್ನು ಕಲಿಸಿ.
ಪೋಷಕರು ಕಲಿಸುವ ಈ ಸಣ್ಣ ಪಾಠಗಳು ಹೆಣ್ಣುಮಕ್ಕಳನ್ನು ಮಾನಸಿಕವಾಗಿ ಬಲಶಾಲಿಗಳನ್ನಾಗಿ ಮಾಡುತ್ತವೆ.ಜೀವನದ ಸವಾಲುಗಳನ್ನು ಸುಲಭವಾಗಿ ಎದುರಿಸಲು, ಸಮಾಜದಲ್ಲಿ ಯಶಸ್ವಿ ಮಹಿಳೆಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
