ಹೆಚ್ಡಿಕೆ ಹೇಳಿಕೆಯಿಂದ ನೋವಾಗಿದೆ ಎಂದ ಸುಧಾಕರ್ ಪುತ್ರಗೆ JDS ಕೌಂಟರ್
ಬೆಂಗಳೂರು, ಏಪ್ರಿಲ್ 29: ಸಚಿವ ಡಿ.ಸುಧಾಕರ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಅವರ ಆರೋಗ್ಯದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಡಿದ್ದ ಮಾತುಗಳೀಗ ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾನೆ. ಯಾವ ಕಾರಣಕ್ಕೆ ಕೆಲವು ವಿಷಯಗಳನ್ನು ಮುಚ್ಚಿಟ್ಟಿದ್ದಾರೆ. ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಮುಚ್ಚಿಡಲಾಗಿದೆಯೇ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದರು. ಅವರ ಈ ಹೇಳಿಕೆಗೆ ಸಚಿವ ಡಿ.ಸುಧಾಕರ್ ಪುತ್ರ ಅಸಮಾಧಾನ ವ್ಯಕ್ತಪಡಿಸಿ, ಆ ಸಂಬಂಧ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಎಕ್ಸ್ ಪೋಸ್ಟ್ ಮಾಡಿರುವ ಜೆಡಿಎಸ್, ಸಚಿವರ ಪುತ್ರನಿಗೆ ಕೌಂಟರ್ ಕೊಟ್ಟಿದೆ.
ಸಚಿವರ ಪುತ್ರನ ವಿಡಿಯೋದಲ್ಲೇನಿತ್ತು?
ಕುಮಾರಸ್ವಾಮಿ ಅವರು ನೀಡಿರುವ ಹೆಬ್ಬೆಟ್ಟು ಹೇಳಿಕೆಯ ಬಗ್ಗೆ ನೋವಾಗಿದೆ. ನನ್ನ ತಂದೆ ಅನಾರೋಗ್ಯ ವಿಚಾರವನ್ನು ರಾಜಕೀಯಕ್ಕೆ ಬಳಸಲಾಗಿದೆ. ತಂದೆ ಸಚಿವ ಡಿ.ಸುಧಾಕರ್ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ಸಿಟಿ ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದಷ್ಟು ಬೇಗ ಗುಣಮುಖರಾಗಿ ಬರುವ ಬಗ್ಗೆ ನಮಗೆ ನಂಬಿಕೆಯಿದೆ. ಸಿಎಂ, ಡಿಸಿಎಂ, ಸಚಿವರು ಆಸ್ಪತ್ರೆಗೆ ಬಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿರುವ ವಿಡಿಯೋವನ್ನು ಸಚಿವರ ಪುತ್ರ ಸುಹಾಸ್ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಆಸ್ಪತ್ರೆಯಿಂದಲೇ ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಜೆಡಿಎಸ್ ಕೌಂಟರ್ ಏನು?
ಸಚಿವರಾದ ಡಿ. ಸುಧಾಕರ್ ಅವರ ಪುತ್ರರು ತಮ್ಮ ತಂದೆಯ ಆರೋಗ್ಯದ ಬಗ್ಗೆ ರಾಜ್ಯದ ಜನರ ಎದುರು ಹೇಳಲು ಯಾರೋ ಬರೆದುಕೊಟ್ಟ ಸ್ಕ್ರೀಪ್ಟ್ ಓದುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ.
10ಕ್ಕೂ ಹೆಚ್ಚು ಬಾರಿ ಎಡಿಟ್ ಮಾಡಿರುವ ಆ ವಿಡಿಯೋ ನೋಡಿದರೆ, ಯಾರದೋ ಒತ್ತಡಕ್ಕೆ ಮಣಿದು ರಾಜಕೀಯವಾಗಿ ಈ ರೀತಿ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಇದರ…
— Janata Dal Secular (@JanataDal_S) April 29, 2026
ಸಚಿವ ಡಿ. ಸುಧಾಕರ್ ಅವರ ಪುತ್ರ ತಮ್ಮ ತಂದೆಯ ಆರೋಗ್ಯದ ಬಗ್ಗೆ ರಾಜ್ಯದ ಜನರ ಎದುರು ಹೇಳಲು ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಓದುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ. 10ಕ್ಕೂ ಹೆಚ್ಚು ಬಾರಿ ಎಡಿಟ್ ಮಾಡಿರುವ ಆ ವಿಡಿಯೋ ನೋಡಿದರೆ, ಯಾರದೋ ಒತ್ತಡಕ್ಕೆ ಮಣಿದು ರಾಜಕೀಯವಾಗಿ ಈ ರೀತಿ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಇದರ ಹಿಂದಿರುವ ಆ ಮಹಾನಾಯಕ ಯಾರು? ಎಂದು ಎಕ್ಸ್ ಪೋಸ್ಟ್ ಮೂಲಕ ಜೆಡಿಎಸ್ ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯ ಭೇಟಿಗೂ ಮುನ್ನ ಸಚಿವರು ವೆಂಟಿಲೇಟರ್ನಿಂದ ಉಸಿರಾಟ ಮಾಡ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದರು. ಸಚಿವರಾದ ಡಿ. ಸುಧಾಕರ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಅವರಿಗೆ ಪ್ರಜ್ಞೆ ಬಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಸಿಎಂ ಭೇಟಿಯ ಮರುದಿನ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದಿರುವ ಚಿತ್ರದಲ್ಲಿ ಯಾವುದೇ ವೆಂಟಿಲೇಟರ್ ಕಾಣಿಸುತ್ತಿಲ್ಲ. ಹಾಗಾದರೆ, ಒಂದೇ ದಿನದಲ್ಲಿ ವೆಂಟಿಲೇಟರ್ ಕಣ್ಮರೆಯಾಯಿತೆ? ಸಚಿವರು ಲೈಫ್ ಸಪೋರ್ಟ್ ಇಲ್ಲದೆ ಉಸಿರಾಟ ಮಾಡುತ್ತಿದ್ದಾರೆಯೇ, ಅವರ ಆರೋಗ್ಯ ಸಮಸ್ಯೆಗಳು ನಿವಾರಣೆ ಆಯಿತೇ? ಸಚಿವರ ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಯಾಕಿಷ್ಟು ರಹಸ್ಯ ಮಾಡುತ್ತಿದೆ? ಅವರ ಆರೋಗ್ಯದ ಚೇತರಿಕೆ ಬಗ್ಗೆ ಆಸ್ಪತ್ರೆಯವರೂ ಯಾಕೆ ಹೆಲ್ತ್ ಬುಲೆಟಿನ್ ಹೊರಡಿಸುತ್ತಿಲ್ಲ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಆತಂಕದ ಪ್ರಶ್ನೆ. ಇದನಷ್ಟೇ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿರೋದು ಎಂದು ಜೆಡಿಎಸ್ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.