ಬೆಂಗಳೂರು, ಜು.18: ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ (DCP) ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ ಏಕಕಾಲಕ್ಕೆ 150ಕ್ಕೂ ಹೆಚ್ಚು ಹಳೆಯ ಹಾಗೂ ಸಕ್ರಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಲಾಗಿದೆ.
ನಗರದ ವೈಟ್‌ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್. ಪುರಂ ಹಾಗೂ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ತಡರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗೆ ಪೊಲೀಸರು ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಈ ಮೆಗಾ ರೈಡ್‌ಗಾಗಿ ಒಟ್ಟು 28 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 140ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಏಕಕಾಲಕ್ಕೆ ರೌಡಿಗಳ ಮನೆಗಳಿಗೆ ನುಗ್ಗಿದ್ದಾರೆ.
ಪೊಲೀಸ್ ತಂಡಗಳು ರೌಡಿಶೀಟರ್‌ಗಳ ಮನೆ, ಪ್ರಸ್ತುತ ವಿಳಾಸ ಹಾಗೂ ಅವರ ಪೂರ್ವಾಪರಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಕೆಲವು ರೌಡಿಗಳನ್ನು ರಸ್ತೆಯಲ್ಲೇ ತಡೆದು ಅವರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸರಿಯಾದ ದಾಖಲೆ ಪತ್ರಗಳಿಲ್ಲದ ಒಟ್ಟು 13 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ರೌಡಿಶೀಟರ್‌ಗಳ ಮನೆಗಳಲ್ಲಿ ಯಾವುದೇ ಮಾರಕಾಸ್ತ್ರಗಳು ಅಥವಾ ಅಕ್ರಮ ವಸ್ತುಗಳು ಇವೆಯೇ ಎಂದು ತಪಾಸಣೆ ನಡೆಸಿದ ಪೊಲೀಸರು, ಎಲ್ಲರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುವುದು, ಹಫ್ತಾ ವಸೂಲಿ ಅಥವಾ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಜೈಲಿಗಟ್ಟಲಾಗುವುದು ಎಂದು ಖಾಕಿ ಪಡೆ ಖಡಕ್ ವಾರ್ನಿಂಗ್ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ