ಮಂಡ್ಯ, ಆಗಸ್ಟ್ 18: ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ತೀವ್ರಗೊಂಡಿದ್ದು, ತಮಿಳುನಾಡಿಗೆ ಲೆಕ್ಕವಿಲ್ಲದಷ್ಟು ನೀರು ಹರಿಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) 12,000 ಕ್ಯೂಸೆಕ್ಸ್ ನೀರು ಬಿಡಲು ಆದೇಶಿಸಿದ್ದರೂ, ವಾಸ್ತವದಲ್ಲಿ 15,000 ಕ್ಯೂಸೆಕ್ಸ್ ಗಿಂತಲೂ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ರಾಜ್ಯದ ರೈತರಲ್ಲಿ, ವಿಶೇಷವಾಗಿ ಮಂಡ್ಯ ಭಾಗದ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ನೀರು ಬಿಡಲ್ಲ ಎಂದು ಹೇಳಿಕೆ ನೀಡುತ್ತಿದ್ದರೂ, ಅದನ್ನು ಪಾಲಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಜಲಸಂಪನ್ಮೂಲ ಸಚಿವರು ಇದೇ ಜಿಲ್ಲೆಯವರಾಗಿರುವುದರಿಂದ, ಈ ವಿಷಯದಲ್ಲಿ ಸದನದ ಒಳಗೆ ಚರ್ಚಿಸಿ ರಾಜ್ಯದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯಕ್ಕೆ ವ್ಯತಿರಿಕ್ತವಾಗಿ ತೀರ್ಪು ಬಂದರೆ, ಅದರ ಸಂಪೂರ್ಣ ಹೊಣೆ ಕರ್ನಾಟಕ ಸರ್ಕಾರದ್ದೇ ಆಗಿರುತ್ತದೆ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಕಾವೇರಿ ನದಿ ನೀರಿನ ಲಭ್ಯತೆ, ಸಂಗ್ರಹ ಮತ್ತು ಹರಿಯುವಿಕೆಯ ಎಲ್ಲಾ ಅಂಕಿಅಂಶಗಳು ಸ್ಪಷ್ಟವಾಗಿ ಲಭ್ಯವಿವೆ. ಈ ಸತ್ಯಗಳನ್ನು ನ್ಯಾಯಾಲಯದ ಮುಂದೆ ಜವಾಬ್ದಾರಿಯುತವಾಗಿ ಮಂಡಿಸಿ, ಗೆಲುವು ಪಡೆಯುವುದು ಸರ್ಕಾರದ ಹೊಣೆಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ತನ್ನ ಸಮರ್ಥತೆಯನ್ನು ತೋರಿಸಬೇಕಾಗಿದೆ ಎಂದು ರೈತರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ