ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
Image Credit source: PTI
ಚೆನ್ನೈ, ಆಗಸ್ಟ್ 18: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರವನ್ನೂ ನೆರೆ ರಾಜ್ಯದ ಸರ್ಕಾರ ಘೋಷಿಸಿದೆ. ಅಲ್ಲಿನ ವಿಧಾನ ಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದು, ಕರ್ನಾಟಕ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ತಮಿಳುನಾಡು ಸದನದಲ್ಲಿ ಭಾರಿ ಚರ್ಚೆ
ಹನೂರಿನಲ್ಲಿ ನಡೆದಿರುವ ಘಟನೆ ಬಗ್ಗೆ ತಮಿಳುನಾಡು ವಿಧಾನ ಸಭೆಯಲ್ಲಿ ಭಾರಿ ಚರ್ಚೆಯಾಗಿದ್ದು, ಮೃತರೆಲ್ಲರೂ ತಮಿಳುನಾಡು ಮೂಲದವರು. ಮೆಟ್ಟೂರು ಜಲಾಶಯ ನಿರ್ಮಾಣದಿಂದ ಹನೂರಿನಲ್ಲಿ ಅವರು ವಾಸವಿದ್ದು, ಅವರೆಲ್ಲ ತಮಿಳರು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯಗಳು ಸದನದಲ್ಲಿ ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹನೂರು ಶೂಟೌಟ್ಗೆ ಬಿಗ್ ಟ್ವಿಸ್ಟ್: ಅರಣ್ಯ ಇಲಾಖೆ ಸಾಕ್ಷ್ಯಗಳ ಮೇಲೆ ಅನುಮಾನ!
ತೋಮಿಯರ್ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ಭೇಟಿ
ಮತ್ತೊಂದೆಡೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ತಂಡ ಭೇಟಿ ನೀಡಿದೆ. ತೋಮಿಯರ್ಪಾಳ್ಯದ ಚರ್ಚ್ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ತಮಿಳರ ಹತ್ಯೆಯಾಗಿದೆ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿ ತಮಿಳುನಾಡು ಸಿಎಂ ವಿಜಯ್ ಎಕ್ಸ್ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ನಡೆದಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 1:54 pm, Tue, 18 August 26