ಚೆನ್ನೈ, ಮೇ 9: ತಮಿಳುನಾಡಿನಲ್ಲಿ ಟಿವಿಕೆ ಎಂಬ ಹೊಸ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲೇ ಬರೋಬ್ಬರಿ 108 ಸ್ಥಾನಗಳನ್ನು ಪಡೆದ ವಿಜಯ್ (Vijay) ಅವರಿಗೆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಎಡಪಕ್ಷಗಳ ಕೈಗೊಂಬೆಯಾಗುವಂತಾಗಿದೆ. ವಿಜಯ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರಿಂದಾಗಿ ಟಿವಿಕೆ ಬಳಿ ಈಗಿರುವ ಸಂಖ್ಯೆ 107. ಇದರ ಜೊತೆ ಕಾಂಗ್ರೆಸ್ನ 5, ಸಿಪಿಐನ 2, ಸಿಪಿಎಂನ 2 ಸ್ಥಾನಗಳು ಸೇರಿ ವಿಜಯ್ ಅವರಿಗೆ ಇರುವ ಸಂಖ್ಯೆ 116 ಆಗಿದೆ. ಆದರೆ, ಸರ್ಕಾರ ರಚನೆಗೆ ವಿಜಯ್ಗೆ 118 ಸ್ಥಾನಗಳು ಬೇಕಾಗಿವೆ. ಒಂದುವೇಳೆ ವಿಸಿಕೆ ತನ್ನ ಬಳಿ ಇರುವ ಇಬ್ಬರು ಶಾಸಕರ ಬೆಂಬಲ ಘೋಷಿಸಿದರೆ ಮಾತ್ರ ವಿಜಯ್ ಮುಖ್ಯಮಂತ್ರಿಯಾಗಲು ಸಾಧ್ಯ. ಹೀಗಾಗಿ, ವಿಸಿಕೆ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿದೆ. ನಿನ್ನೆ ವಿಜಯ್ಗೆ ಬೆಂಬಲ ಘೋಷಿಸಿದಾಗಿನಿಂದ ವಿಸಿಕೆ ಟ್ವಿಟ್ಟರ್ ಹ್ಯಾಂಡಲ್ ಬ್ಲಾಕ್ ಆಗಿತ್ತು.
ಇದೀಗ ವಿಸಿಕೆ ಸಭೆಯನ್ನು ನಡೆಸುತ್ತಿದ್ದು, ಈ ಸಭೆಯ ಬಳಿಕ ವಿಜಯ್ ಅವರಿಗೆ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಲಿದೆ. ಒಂದುವೇಳೆ ಟಿವಿಕೆಗೆ ಬೆಂಬಲ ನೀಡುವುದಾದರೂ ವಿಸಿಕೆ ತನಗೆ ಡಿಸಿಎಂ ಹುದ್ದೆ ಬೇಕೆಂದು ಬೇಡಿಕೆ ಇಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, 108 ಸ್ಥಾನಗಳನ್ನು ಪಡೆದರೂ ಟಿವಿಕೆ 2 ಸ್ಥಾನಗಳನ್ನು ಪಡೆದ ಪಕ್ಷಗಳ ಮುಂದೆ ಮಂಡಿಯೂರುವಂತಾಗಿದೆ.
ಇದನ್ನೂ ಓದಿ: Vijay Swearing-In: ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ
ನಿನ್ನೆ ವಿಜಯ್ ಅವರಿಗೆ ವಿಸಿಕೆ ಜೊತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಬೆಂಬಲ ಘೋಷಿಸಿದ್ದರಿಂದ ಬಹುಮತದ ಬಗ್ಗೆ ತಲೆಬಿಸಿ ಇರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಮುಸ್ಲಿಂ ಲೀಗ್ ತಾನು ಡಿಎಂಕೆ ನೇತೃತ್ವದ ಮೈತ್ರಿಕೂಟದ ಜೊತೆಯೇ ಇರುತ್ತೇನೆ ಎಂದು ಘೋಷಿಸುವ ಮೂಲಕ ಟಿವಿಕೆಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು. ಇತ್ತ ವಿಸಿಕೆ ಕೂಡ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸುತ್ತಿರುವುದರಿಂದಾಗಿ ತಮಿಳುನಾಡಿನಲ್ಲಿ ಇಂದು ಸರ್ಕಾರ ರಚನೆಯಾಗಲಿದೆಯಾ, ಇಲ್ಲವಾ ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:55 am, Sat, 9 May 26
