ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ: ಸಮಯ, ಸ್ಥಳದ ಮಾಹಿತಿ ಇಲ್ಲಿದೆ – Kannada News | Vijay’s CM Oath Ceremony: Tamil Nadu Set for New Era with TVK Government on May 10

ಚೆನ್ನೈ, ಮೇ 09: ಕೊನೆಗೂ ತಮಿಳುನಾಡು ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ನಟ ದಳಪತಿ ವಿಜಯ್​​ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದೆ. TVK ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಸಂಪಾದಿಸಿದ ಹಿನ್ನೆಲೆ, ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾಳೆ ಚೆನ್ನೈನ ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.15ಕ್ಕೆ ಸಿಎಂ ಆಗಿ ವಿಜಯ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯ್​ ಜೊತೆ ಪ್ರಮಾಣವಚನ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ವಿಜಯ್ ಹಿರಿಯ ಟಿವಿಕೆ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ 120 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು. ವಿದುತಲೈ ಚಿರತೈಗಲ್ ಕಚ್ಚಿ (VCK), ಭಾರತೀಯ ಕಮ್ಯುನಿಸ್ಟ್ ಪಕ್ಷ (CPI), ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದ ನಂತರ ಕಗ್ಗಂಟಾಗಿದ್ದ ಸರ್ಕಾರ ರಚನೆಯ ದಾರಿ ಸುಗಮವಾಗಿತ್ತು. 59 ವರ್ಷಗಳ ಬಳಿಕ ದ್ರಾವಿಡ ರಾಜಕೀಯೇತರ ನಾಯಕನೊಬ್ಬ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವುದು ವಿಶೇಷವಾಗಿದ್ದು, ವಿಜಯ್ ಮೊದಲ ದ್ರಾವಿಡೇತರ ಸಿಎಂ ಆಗಿ ಇತಿಹಾಸ ನಿರ್ಮಿಸಲಿದ್ದಾರೆ.

ಇದನ್ನೂ ಓದಿ: ವಿಜಯ್ ಸಿಎಂ ಆಗುವುದು ಖಚಿತ; ಕೊನೆಗೂ ಟಿವಿಕೆಗೆ ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ

ಏಪ್ರಿಲ್ 23ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಆದರೆ ಈಗ ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಬೆಂಬಲದಿಂದ ಮೈತ್ರಿಕೂಟದ ಬಲ 120ಕ್ಕೆ ಏರಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್ ಒಂದು ಸ್ಥಾನ ತ್ಯಜಿಸಬೇಕಿರುವುದರಿಂದ ಟಿವಿಕೆ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್‌ನ 5 ಶಾಸಕರು ಹಾಗೂ ಸಿಪಿಐ, ಸಿಪಿಐ(ಎಂ), ವಿಟಿಕೆ ಮತ್ತು ಐಯುಎಂಎಲ್ ಪಕ್ಷಗಳ ತಲಾ 2 ಶಾಸಕರು ವಿಜಯ್​​ರನ್ನು ಬೆಂಬಲಿಸಿದ್ದಾರೆ.

‘ರಾಷ್ಟ್ರಪತಿ ಆಡಳಿತ ತಪ್ಪಿಸಲು ಬೆಂಬಲ’

ಈ ನಡುವೆ ಟಿವಿಕೆಗೆ ಬೆಂಬಲ ಘೋಷಣೆ ಮಾಡಿರುವ ಬಗ್ಗೆ ಚೆನ್ನೈನಲ್ಲಿ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಳವನ್ ಸ್ಪಷ್ಟನೆ ನೀಡಿದ್ದಾರೆ. ನಮ್ಮಿಂದ ವಿಜಯ್​ಗೆ ಅಧಿಕಾರ ತಪ್ಪಿತೆಂಬ ಅಪವಾದ ಬರಬಾರದು. ಅಲ್ಲದೆ ರಾಷ್ಟ್ರಪತಿ ಆಡಳಿತ ತಪ್ಪಿಸಬೇಕಿರುವ ಕಾರಣ ವಿಜಯ್​​ಗೆ ಭೇಷರತ್​​ ಬೆಂಬಲ ಘೋಷಿಸಿದ್ದೇವೆ ಎಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *