ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮತ್ತೆ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಈಗ ಅದು ನಿಜವಾಗಿದೆ. ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಜೂನ್ 4ರಂದು ಬಿಡುಗಡೆಯಾಗುತ್ತಿಲ್ಲ. ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೋಷಿಸುವುದಾಗಿ ಯಶ್ ತಿಳಿಸಿದ್ದಾರೆ. ಇದು ಫ್ತಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ದಿನಾಂಕ ಬದಲಾವಣೆಗೆ ಕಾರಣವೇನು?
ಇತ್ತೀಚೆಗೆ ನಡೆದ ‘ಸಿನಿಮಾ ಕಾನ್’ (CinemaCon) ಅಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಜಾಗತಿಕ ಮಟ್ಟದ ವಿತರಕರಿಂದ ಸಿನಿಮಾಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆಯಂತೆ. ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಭರ್ಜರಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ, ಚಿತ್ರತಂಡ ತನ್ನ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಳ್ಳಲು ನಿರ್ಧರಿಸಿದೆ. ಸಿನಿಮಾವನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿ ದೊಡ್ಡ ಮಟ್ಟಕ್ಕೆ ತಲುಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯಶ್ ತಿಳಿಸಿದ್ದಾರೆ.
‘ಟಾಕ್ಸಿಕ್ ನನ್ನ ಪಾಲಿಗೆ ಒಂದು ವಿಶೇಷ ಪ್ರಯಾಣ. ಸಿನಿಮಾ ಕಾನ್‌ನಲ್ಲಿ ವ್ಯಕ್ತವಾದ ಜಾಗತಿಕ ಮಟ್ಟದ ಪ್ರತಿಕ್ರಿಯೆ ಈ ಚಿತ್ರಕ್ಕೆ ವಿಶ್ವಮಟ್ಟದಲ್ಲಿ ಸಿನಿಮಾಗೆ ದೊಡ್ಡ ವೇದಿಕೆ ಬೇಕು ಎಂಬ ನಮ್ಮ ನಂಬಿಕೆಯನ್ನು ಹೆಚ್ಚಿಸಿದೆ. ಭಾರತೀಯ ಸಿನಿಮಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಚಿತ್ರವನ್ನು ಅತ್ಯಂತ ಪ್ರಭಾವಶಾಲಿಯಾಗಿ ಪ್ರೇಕ್ಷಕರ ಮುಂದೆ ತರುವುದು ನಮ್ಮ ಜವಾಬ್ದಾರಿ. ಹೀಗಾಗಿ ಬಿಡುಗಡೆಯ ದಿನಾಂಕವನ್ನು ಬದಲಿಸಿದ್ದೇವೆ. ತಾಳ್ಮೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ನಾವು ಹೆಮ್ಮೆ ಪಡುವಂತಹ ಚಿತ್ರವನ್ನು ನೀಡುತ್ತೇವೆ’ ಎಂದು ಯಶ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್ ರಿಲೀಸ್ ಆಗುವ ಮುನ್ನ ಈ ಕೆಲಸ ಮಾಡಿ’; KVNಗೆ ಬೇಡಿಕೆ ಇಟ್ಟ ಫ್ಯಾನ್ಸ್
ಗೀತು ಮೋಹನ್ ದಾಸ್ ಅವರು ‘ಟಾಕ್ಸಿಕ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕ ಕಾಲಕ್ಕೆ ಸಿನಿಮಾ ಚಿತ್ರೀಕರಣಗೊಂಡಿದ್ದು, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಲಿದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಜಾಗತಿಕ ಮಟ್ಟದ ವಿತರಣೆ ಮತ್ತು ಅಂತರಾಷ್ಟ್ರೀಯ ಸಹಭಾಗಿತ್ವದ ಮೇಲೆ ಗಮನ ಹರಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
